ಭಾನುವಾರ, ಆಗಸ್ಟ್ 25, 2019
26 °C

ಜಿಲ್ಲಾ ಮಕ್ಕಳ ಗ್ರಂಥಾಲಯ ಉದ್ಘಾಟನೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮಕ್ಕಳ ಜ್ಞಾನವೃದ್ಧಿಗೆ ಪೂರಕವಾಗಿ ಜಿಲ್ಲಾ ಮಕ್ಕಳ ಗ್ರಂಥಾಲಯವನ್ನು ತೆರೆಯಲಾಗಿದ್ದು, ಈ ಗ್ರಂಥಾಲಯಗಳಿಗೆ ಮಕ್ಕಳು ಭೇಟಿ ನೀಡಿ, ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ನಗರದ ಗುರುವಾರ ಜಿಲ್ಲಾ ಮಕ್ಕಳ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತರತ್ನ ಪಡೆದಂತಹ ಇಬ್ಬರು ಮೇರು ಪುರುಷರು ಜನಿಸಿದಂತ ಹೆಮ್ಮೆಯ ಜಿಲ್ಲೆ ನಮ್ಮದು. ಇಂತಹ ಜಿಲ್ಲೆಯಲ್ಲಿರುವ ಮಕ್ಕಳ ಜ್ಞಾನಾರ್ಜನೆಗಾಗಿ ಮಕ್ಕಳ ಗ್ರಂಥಾಲಯ ಸ್ಥಾಪಿಸಲಾಗಿದೆ. ಇಲ್ಲಿ ಸಮಾಜ, ವಿಜ್ಞಾನ, ಇತಿಹಾಸ, ಸಾಮಾನ್ಯ ಜ್ಞಾನ ಸೇರಿದಂತೆ ಮಕ್ಕಳ ಬೌದ್ಧಿಕ ವಿಕಸನಕ್ಕೆ ಅಗತ್ಯವಾದ ಪುಸ್ತಕಗಳು ಲಭ್ಯ ಇವೆ’ ಎಂದು ತಿಳಿಸಿದರು.

‘ಮಕ್ಕಳು ಆಗಾಗ ಈ ಗ್ರಂಥಾಲಯಕ್ಕೆ ಭೇಟಿ ನೀಡಿ, ವಿವಿಧ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಮಕ್ಕಳ ಗ್ರಂಥಾಲಯದ ಅಭಿವೃದ್ಧಿಗಾಗಿ ಸಂಸದರ ನಿಧಿಯಿಂದ ₨5 ಲಕ್ಷ ಅನುದಾನ ನೀಡುವೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿ, ‘ಚಾಚಾ ನೆಹರು ಅವರು ಪ್ರಧಾನಿಯಾಗಿದ್ದಾಗ ಖುದ್ದಾಗಿ ಈ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕ ಗ್ರಂಥಾಲಯ ಉದ್ಘಾಟನೆ ಮಾಡಿದ್ದು ಹೆಮ್ಮೆಯ ಸಂಗತಿ. ಆ ಹಳೆಯ ಗ್ರಂಥಾಲಯದ ಪಾರಂಪರಿಕ ಕಟ್ಟಡ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿತ್ತು. ಅದಕ್ಕಾಗಿ ಹಳೆ ಕಟ್ಟಡವನ್ನು ನವೀಕರಿಸಿ ಮಕ್ಕಳ ಗ್ರಂಥಾಲಯವನ್ನು ರೂಪಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಶಂಕರಪ್ಪ ಉಪಸ್ಥಿತರಿದ್ದರು.

Post Comments (+)