ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಚುನಾವಣೆ: ಚಿಕ್ಕಬಳ್ಳಾಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ಘೋಷಣೆ, ಪ್ರಮುಖ ಪಕ್ಷಗಳ ಪಾಳೆಯಗಳಲ್ಲಿ ವಿವಿಧ ಲೆಕ್ಕಾಚಾರ, ಸ್ಪರ್ಧೆಗಾಗಿ ನಾಯಕರ ಮಟ್ಟದಲ್ಲಿ ಲಾಬಿ ಮಾಡುತ್ತಿರುವ ಆಕಾಂಕ್ಷಿಗಳು
Last Updated 16 ಜನವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಚುನಾವಣಾ ಆಯೋಗ ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ಘೋಷಿಸಿದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಾಳೆಯಗಳಲ್ಲಿ ‘ರಾಜಕೀಯ’ ಚಟುವಟಿಕೆಗಳು ಗರಿಗೆದರಿದೆ.

ವಿವಿಧ ಪಕ್ಷಗಳ ನಾಯಕರು ನಗರಸಭೆಯಲ್ಲಿ ತಮ್ಮ ಸಂಖ್ಯಾ ಬಲ ಹೆಚ್ಚಿಕೊಳ್ಳಲು ತಂತ್ರಗಾರಿಕೆ ಮಾಡುತ್ತಿದ್ದರೆ, ಇನ್ನೊಂದೆಡೆ ಆಕಾಂಕ್ಷಿಗಳು ಟಿಕೆಟ್‌ಗಾಗಿ ತೆರೆಮರೆಯಲ್ಲಿ ಮುಖಂಡರ ದುಂಬಾಲು ಬಿದ್ದು, ಲಾಬಿ ಶುರು ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಚುನಾವಣೆ ಘೋಷಣೆ ಎಲ್ಲ ಪಾಳೆಯಗಳಲ್ಲಿ ಗಡಿಬಿಡಿ ಉಂಟು ಮಾಡಿದೆ. ವಿವಿಧ ರಾಜರಾಜಕೀಯ ಲೆಕ್ಕಾಚಾರಗಳಲ್ಲಿ ಮುಳುಗಿದ್ದವರು ಇದೀಗ ಕಾಲಿಗೆ ಚಕ್ರ ಕಟ್ಟಿಕೊಂಡವರ ತೆರದಿ ಓಡಾಟ ಆರಂಭಿಸಿದ್ದಾರೆ. ಇನ್ನೊಂದೆಡೆ, ಕಾರ್ಯಕರ್ತರು ಮತ್ತು ಮತದಾರರು ಈ ಬಾರಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿ ಮುಳುಗಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಶಾಸಕ ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಮೂಲಕ ತಮ್ಮ ಬೆಂಬಲಿಗರನ್ನು ಕೇಸರಿ ಪಾಳೆಯ ಸೇರಿಸಿಕೊಂಡಿದ್ದಾರೆ. ನಗರಸಭೆಯಲ್ಲಿ ಈ ಹಿಂದಿನ ಆಡಳಿತ ಮಂಡಳಿಯಲ್ಲಿ 31 ಸದಸ್ಯರ ಪೈಕಿ ಒಬ್ಬೇ ಒಬ್ಬ ಬಿಜೆಪಿ ಸದಸ್ಯ ಇರಲಿಲ್ಲ. ಹೀಗಾಗಿ, ನಗರಸಭೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಶೂನ್ಯದಿಂದ ಸಾಧನೆ ಮಾಡಬೇಕಾದ ಸವಾಲಿದೆ. ಆದ್ದರಿಂದ ಈ ಬಾರಿಯ ನಗರಸಭೆಯ ಚುನಾವಣೆ ಚಿತ್ರಣ ಹಿಂದೆಂದಿಗಿಂತಲೂ ರಂಗು ಪಡೆಯುವ ಸಾಧ್ಯತೆ ಇದೆ.

2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ನಗರದ 31 ವಾರ್ಡ್‌ಗಳ ಪೈಕಿ ಜೆಡಿಎಸ್‌ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಉಳಿದಂತೆ ಕಾಂಗ್ರೆಸ್‌ ಒಂಬತ್ತು, ಒಂದು ಬಿಎಸ್‌ಆರ್‌ ಕಾಂಗ್ರೆಸ್‌ ಮತ್ತು 11 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿರಲಿಲ್ಲ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಶಾಸಕ ಡಾ.ಕೆ.ಸುಧಾಕರ್ ಅವರ ತಂತ್ರಗಾರಿಕೆ ಎದುರು ಜೆಡಿಎಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಫಲವಾಗಿತ್ತು. ಪಕ್ಷೇತರರ ಸಹಕಾರದೊಂದಿಗೆ ಕಾಂಗ್ರೆಸ್‌ ನಗರಸಭೆಯಲ್ಲಿ ಅಧಿಕಾರ ಹಿಡಿದಿತ್ತು.

ಜೆಡಿಎಸ್‌ ಸದಸ್ಯರ ಪೈಕಿ 26ನೇ ವಾರ್ಡ್‌ ಸದಸ್ಯೆ ಶೋಭಾ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ, ಆ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ತಾಯಿ ಮುತ್ತೈದಮ್ಮ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಾಗ ನಗರಸಭೆಯಲ್ಲಿ ಜೆಡಿಎಸ್‌ ಬಲ ಒಂಬತ್ತಕ್ಕೆ ಕುಸಿದಿತ್ತು. ಆ ಪೈಕಿ 2017ರ ಅಕ್ಟೋಬರ್‌ನಲ್ಲಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಆರು ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಾಗ ಜೆಡಿಎಸ್‌ ಸಂಖ್ಯಾಬಲ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.

ನಗರಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದ 8ನೇ ವಾರ್ಡ್ ಸದಸ್ಯ ಪಿ.ಶ್ರೀನಿವಾಸ್, 16 ನೇ ವಾರ್ಡ್ ಸದಸ್ಯೆ ನಾಗರತ್ನಾ ಯತೀಶ್, 20ನೇ ವಾರ್ಡ್ ಸದಸ್ಯೆ ಎಂ.ಜಯಮ್ಮ, 22ನೇ ವಾರ್ಡ್ ಸದಸ್ಯೆ ಎನ್‌.ಶ್ವೇತಾ ಮಂಜುನಾಥ್, 23ನೇ ವಾರ್ಡ್ ಸದಸ್ಯೆ ಜಿ.ಭಾರತಿದೇವಿ ಆನಂದರೆಡ್ಡಿ ಮತ್ತು 27ನೇ ವಾರ್ಡ್ ಸದಸ್ಯೆ ಭಾರತಿದೇವಿ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಅಂತಿಮವಾಗಿ 1ನೇ ವಾರ್ಡ್‌ ಸದಸ್ಯ ಬಿ.ಎಲ್‌.ಕೇಶವಕುಮಾರ್, 25ನೇ ವಾರ್ಡ್‌ನ ಸಿ.ಎಂ.ಶ್ರೀನಿವಾಸರೆಡ್ಡಿ (ಬಂಡ್ಲು ಶ್ರೀನಿವಾಸ್) ಮತ್ತು 28ನೇ ವಾರ್ಡ್‌ನ ಕಿಸಾನ್ ಕೃಷ್ಣಪ್ಪ ಅವರು ಜೆಡಿಎಸ್‌ನಲ್ಲಿ ಉಳಿದುಕೊಂಡಿದ್ದರು.

ನಗರಸಭೆಯಲ್ಲಿ ಮಾಮೂಲಿಯಂತೆ ಹಾಲಿ ಮತ್ತು ಮಾಜಿ ಶಾಸಕರು ಅಧಿಕಾರ ಹಿಡಿಯಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಹಾಲಿ ಶಾಸಕರು ಅಧಿಕಾರ ಉಳಿಸಿಕೊಳ್ಳಲು, ಮಾಜಿ ಶಾಸಕರು ಕಳೆದುಕೊಂಡಿರುವ ಅಧಿಕಾರ ಹಿಡಿಯಲು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಆಕಾಂಕ್ಷಿಗಳ ಲಾಬಿಗಳ ನಡುವೆಯೇ ಎಲ್ಲ ಪಕ್ಷಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಭ್ಯರ್ಥಿಗಳ ಆಯ್ಕೆಯೇ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ಈ ಹಿಂದಿನ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್‌ನಿಂದ 10 ಸದಸ್ಯರು ಗೆದ್ದಿದ್ದರೂ, ಸದಸ್ಯರು ತಲಾ ಐದರಂತೆ ಸುಧಾಕರ್ ಮತ್ತು ಮುಖಂಡ ಕೆ.ವಿ.ನವೀನ್‌ ಕಿರಣ್ ಅವರ ಬಣವಾಗಿ ಹಂಚಿ ಹೋಗಿದ್ದರು. ಈ ಪೈಕಿ 6ನೇ ವಾರ್ಡ್‌ನ ಜಿ.ಎನ್.ನಾರಾಯಣಸ್ವಾಮಿ, 13ನೇ ವಾರ್ಡ್‌ನ ಪದ್ಮಮ್ಮ, 14ನೇ ವಾರ್ಡ್‌ನ ಕೆ.ಟಿ.ಭಾರತಿ, 26ನೇ ವಾರ್ಡ್‌ನ ಮುತ್ತೈದಮ್ಮ ಮತ್ತು 29ನೇ ವಾರ್ಡ್‌ನ ಸದಸ್ಯೆ ಲೀಲಾವತಿ ಶ್ರೀನಿವಾಸ್ ಅವರು ಸುಧಾಕರ್ ಅವರನ್ನು ಬೆಂಬಲಿಸಿದ್ದರು.

2ನೇ ವಾರ್ಡ್‌ನ ಶ್ರೀನಾಥ್‌, 3ನೇ ವಾರ್ಡ್‌ನ ರತ್ನಮ್ಮ, 15ನೇ ವಾರ್ಡ್‌ನ ದೇವರಾಜ್, 18ನೇ ವಾರ್ಡ್‌ನ ನಿರ್ಮಲಾ ಪ್ರಭು ಮತ್ತು 24ನೇ ವಾರ್ಡ್‌ನ ಸದಸ್ಯೆ ವಿ.ಲಕ್ಷ್ಮೀ ಅವರು ನವೀನ್‌ ಕಿರಣ್‌ ಅವರನ್ನು ಬೆಂಬಲಿಸಿದ್ದರು. ಈ ಬಾರಿ ಯಾವೆಲ್ಲ ಸದಸ್ಯರ ಒಲುವು ಹೇಗಿದೆ? ಈ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಸಹಕಾರ ನೀಡಿದವರ ಪೈಕಿ ಸದ್ಯ ಎಷ್ಟು ಸದಸ್ಯರು ಬಿಜೆಪಿಗೆ ಪದಾರ್ಪಣೆ ಮಾಡುತ್ತಾರೆ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ಈ ಹಿಂದಿನ ಅವಧಿಯಲ್ಲಿ ಅಂತಿಮವಾಗಿ ಜೆಡಿಎಸ್‌ನಲ್ಲಿಯೇ ಉಳಿದಿದ್ದ ಮೂರು ಸದಸ್ಯರ ಪೈಕಿ ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹೊಸ್ತಿಲಲ್ಲಿ ಕೇಶವಕುಮಾರ್ ಅವರು ಸುಧಾಕರ್‌ ಅವರ ಬಣ ಸೇರಿದ್ದಾರೆ. ಇನ್ನು ಬಂಡ್ಲು ಶ್ರೀನಿವಾಸ್ ಅವರ ಸ್ಪರ್ಧೆಗೆ ಮೀಸಲಾತಿ ಅಡ್ಡಿಯಾಗಲಿದೆ ಎನ್ನಲಾಗಿದೆ.

ಈ ಚುನಾವಣೆ ಬಿಜೆಪಿಗೆ ಅಧಿಕಾರ ಹಿಡಿಯಲೇ ಬೇಕಾದ, ಜೆಡಿಎಸ್‌ಗೆ ತನ್ನ ಪ್ರಾಬಲ್ಯ ಮರಳಿ ಗಳಿಸಿಕೊಳ್ಳಬೇಕಾದ ಮತ್ತು ಕಾಂಗ್ರೆಸ್‌ಗೆ ಅಧಿಕಾರ ಉಳಿಸಬೇಕಾದ ಸವಾಲು ಒಡ್ಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT