ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: 829 ವಾಹನಗಳು ವಶಕ್ಕೆ

10ರ ನಂತರ ಪೂರ್ಣವಾಗಿ ಸ್ತಬ್ಧವಾದ ಜಿಲ್ಲೆ; ವಾಹನಗಳ ತಡೆದಿದ್ದಕ್ಕೆ ಪೊಲೀಸರ ವಿರುದ್ಧ ಆಕ್ರೊಶ
Last Updated 10 ಮೇ 2021, 14:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಲಾಕ್‌ಡೌನ್‌ನ ಮೊದಲ ದಿನವಾದ ಸೋಮವಾರ ಚಟು ವಟಿಕೆ್ಗಳು ಸ್ತಬ್ಧವಾಗಿದ್ದವು. ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದ ಕಾರಣ ಜನರು ಮಾರುಕಟ್ಟೆಯಲ್ಲಿ ಸಾಮಗ್ರಿಗಳ ಖರೀದಿ ನಡೆಸಿದರು.

ಲಾಕ್‌ಡೌನ್‌ ಬಗ್ಗೆ ಮೊದಲೇ ತಿಳಿದಿದ್ದ ಕಾರಣ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿಯೇನೂ ಜನರು ಖರೀದಿಗೆ ಬಂದಿರಲಿಲ್ಲ. ಈ ಹಿಂದಿನ ದಿನಗಳಲ್ಲಿಯೇ ಆಹಾರ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ವಾಹನಗಳ ಓಡಾಟಕ್ಕೆ ಅವಕಾಶವಿಲ್ಲದ ಕಾರಣ ಕೆಲವರು ನಡೆದೇ ಮಾರುಕಟ್ಟೆಗಳಿಗೆ ಬಂದಿದ್ದರು. ಮತ್ತೊಂದಿಷ್ಟು ಮಂದಿ ಬೈಕ್‌ಗಳಲ್ಲಿಯೂ ಬಂದಿದ್ದರು.

ಬೆಳಿಗ್ಗೆಯಿಂದಲೇ ನಗರದಲ್ಲಿ ವಾಹನಗಳಲ್ಲಿ ಓಡಾಡುವವರನ್ನು ಪೊಲೀಸರು ತಡೆದರು. ಜಿಲ್ಲೆಯಲ್ಲಿ ಬೈಕ್, ಕಾರು ಸೇರಿದಂತೆ ಒಟ್ಟು 829 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು.

ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಒಟ್ಟು 631 ವಾಹನಗಳನ್ನು ವಶಕ್ಕೆ ಪಡೆದಿದ್ದರು. 11ರ ವೇಳೆಗೆ ಸಂಖ್ಯೆ 744, ಸಂಜೆಯ ವೇಳೆಗೆ 829ಕ್ಕೆ ತಲುಪಿತು.

ವಾಹನಗಳನ್ನು ವಶಕ್ಕೆ ಪಡೆಯುವ ವೇಳೆ ನಾಗರಿಕರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದವೂ ನಡೆಯಿತು. ಪೊಲೀಸರ ಮೇಲೆ ಸಾರ್ವಜನಿಕರು ಆಕ್ರೋಶ ಸಹ ವ್ಯಕ್ತಪಡಿಸಿದರು.

ನಗರದಲ್ಲಿದ್ದು ಹೊರವಲಯದ ತಮ್ಮ ತೋಟಗಳಿಗೆ ತೆರಳುತ್ತಿದ್ದವರು, ಔಷಧಿ ಖರೀದಿಗೆ ಬಂದವರು, ರೋಗಿಗಳನ್ನು ಕರೆತರುವವರು...ಹೀಗೆ ಎಲ್ಲ ವಾಹನಗಳನ್ನು ತಡೆದು ವಿಚಾರಣೆಗೆ ಒಳಪಡಿಸುತ್ತಿದ್ದರು. ಆಗ ನಿತ್ಯದ ಮತ್ತು ತುರ್ತು ಕೆಲಸಗಳಿಗೆ ಹೊರಟವರು ಹಾಗೂ ಪೊಲೀಸರು ನಡುವೆ ತೀವ್ರ ಜಟಾಪಟಿ ನಡೆಯುತ್ತಿತ್ತು. ಬೈಕ್‌ಗಳ ಕೀಗಳನ್ನು ತೆಗೆದುಕೊಂಡು ಪೊಲೀಸರು ವಾಹನಗಳನ್ನು ರಸ್ತೆಯ ಬದಿಗೆ ಹಾಕಿಸುತ್ತಿದ್ದರು.

ನಗರದ ಹೊರವಲಯದ ಹಳ್ಳಿಗಳಿಂದ ಖರೀದಿಗೆ ಬರುತ್ತಿದ್ದವರನ್ನೂ ತಡೆಯಲಾಯಿತು. ಕೆಲವರು ವೈದ್ಯರು ನೀಡಿದ ಔಷಧ ಚೀಟಿಗಳನ್ನು ತೋರಿಸಿ ಔಷಧ ಖರೀದಿಗೆ ಹೊರಟಿದ್ದು ಬಿಡುವಂತೆ ಕೋರುತ್ತಿದ್ದರು. ವಶಕ್ಕೆ ಪಡೆದ ಬೈಕ್‌ಗಳನ್ನು ನಗರದ ಬಿಬಿ ರಸ್ತೆಯ ಬಲಮುರಿ ವೃತ್ತ, ಶಿಡ್ಲಘಟ್ಟ ವೃತ್ತ ಸೇರಿದಂತೆ ಕೆಲವು ಕಡೆಗಳಲ್ಲಿ ಪೊಲೀಸರು ನಿಲ್ಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಚಿಕ್ಕಬಳ್ಳಾ ಪುರ ನಗರದ ವಿವಿಧ ಕಡೆಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು
ಪರಿಶೀಲಿಸಿದರು.

ನಗರದ ವಿವಿಧ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅವಳವಡಿಸಿದ್ದು ಜನರ ಸಂಚಾರದ ಮೇಲೆ ಪೊಲೀಸರು ತೀವ್ರವಾದ ನಿಗಾ ಇಟ್ಟಿದ್ದಾರೆ.

***

44,400 ದಂಡ ವಸೂಲಿ

ಜಿಲ್ಲೆಯಲ್ಲಿ 790 ದ್ವಿಚಕ್ರ ವಾಹನಗಳು, 1 ತ್ರಿಚಕ್ರ ವಾಹನ ಹಾಗೂ 38 ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಕ್‌ಡೌನ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಹಾಗೂ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ವಶಕ್ಕೆ ಪಡೆದ ವಾಹನಗಳಿಗೆ ದಂಡ ವಿಧಿಸಲಾಗಿದ್ದು ಒಟ್ಟು ₹ 44,400 ದಂಡ ಸಂಗ್ರಹವಾಗಿದೆ.
***
ಅಸ್ವಸ್ಥ ಮಹಿಳೆಗೆ ಪೊಲೀಸರ ನೆರವು

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದಲ್ಲಿ ಅಸ್ವಸ್ಥಗೊಂಡ ಮಹಿಳೆಯೊಬ್ಬರಿಗೆ ಪೊಲೀಸರು ನೆರವಾಗಿದ್ದಾರೆ.

ಗೂಳೂರಿನಿಂದ ಬಾಗೇಪಲ್ಲಿಗೆ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಆಟೊದಲ್ಲಿ ಬಂದಿದ್ದರು. ಪೊಲೀಸ್ ನಾಕಬಂದಿ ಕಂಡು ಆಟೊ ಚಾಲಕ ದೂರದಲ್ಲಿ ನಿಲ್ಲಿಸಿ ಹೋಗಿದ್ದಾರೆ. ಸಕಾಲಕ್ಕೆ ಆಹಾರ ದೊರೆಯದೆ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಕಾನ್‌ಸ್ಟೆಬಲ್ ಧನಂಜಯ ಮಹಿಳೆಯನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT