ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಗಾಯದ ಮೇಲೆ ಬರೆಯಂತಾದ ಟೋಲ್‌

ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಮಾರುಕಟ್ಟೆಗಳಿಗಾಗಿ ರೈತರ ಪರದಾಟ, ಸಂಕಷ್ಟದ ಸಮಯದಲ್ಲೂ ಸುಂಕ ವಸೂಲಿ
Last Updated 23 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ರೈತರು ಒಂದೆಡೆ ಕೊರೊನಾ ವೈರಸ್‌ ಸೋಂಕು ಸೃಷ್ಟಿಸಿದ ಭೀತಿ, ಇನ್ನೊಂದೆಡೆ ಲಾಕ್‌ಡೌನ್‌ ಕಾರಣಕ್ಕೆ ಮನೆಯಿಂದ ಆಚೆ ಬಂದು ತೋಟದಲ್ಲಿರುವ ಫಸಲು ಮಾರುವ ಫಜೀತಿಗೆ ಸಿಲುಕಿರುವಾಗಲೇ ಹೆದ್ದಾರಿಯ ಟೋಲ್‌ ಕೇಂದ್ರಗಳಲ್ಲಿ ರೈತರಿಂದ ಸುಂಕ ವಸೂಲಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.

ಕೊರೊನಾ ವೈರಸ್‌ ತಂದಿತ್ತ ಜೈವಿಕ ವಿಪತ್ತಿನಿಂದ ದೇಶದ ಎಲ್ಲ ಕ್ಷೇತ್ರಗಳು ತತ್ತರಿಸುವಾಗ, ಜನರಿಗೆ ಜೀವನಾವಶ್ಯಕ ಹಣ್ಣು, ತರಕಾರಿ ಪೂರೈಕೆಗೆ ಮುಂದಾದ ರೈತರಿಂದಲೂ ಟೋಲ್‌ ಸಂಗ್ರಹಿಸುತ್ತಿರುವುದು ಅಮಾನವೀಯ. ಗಾಯದ ಮೇಲೆ ಬರೆ ಎಳೆದಂತೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ತುರ್ತು ಸೇವೆಯನ್ನು ಸರಾಗಗೊಳಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾರ್ಚ್‌ 23 ರಿಂದ ಏಪ್ರಿಲ್‌ 20ರ ವರೆಗೆ ಟೋಲ್‌ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಆದೇಶಿಸಿತ್ತು.

ಇದೀಗ ಏಪ್ರಿಲ್‌ 20 ರಿಂದ ‌ರಾಜ್ಯದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲ 40 ಟೋಲ್‌ ಫ್ಲಾಜಾಗಳಲ್ಲಿ ಟೋಲ್‌ ಸಂಗ್ರಹ ಪುನರಾರಂಭಗೊಂಡಿದ್ದು, ಇದು ರೈತರಿಗೆ ಸಂಕಷ್ಟ ತಂದ್ದೊಡಿದೆ.

ಕೊರೊನಾ ಸೃಷ್ಟಿಸಿದ ವಿಪತ್ತು ರೈತರು ಬೆಳೆದ ಹೂವು , ಹಣ್ಣು , ತರಕಾರಿಗಳಿಗೆ ನಿರ್ದಿಷ್ಟ ಮಾರುಕಟ್ಟೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಅನೇಕ ರೈತರು ತೋಟದಲ್ಲಿ ಬೆಳೆದ ಫಸಲು ಕಣ್ಣೆದುರೆ ಹಾಳಾಗುವುದು ನೋಡಲಾಗದೆ ಸಮೀಪದ ನಗರ, ಪಟ್ಟಣಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಹಾಕಿದ ಬಂಡವಾಳವನ್ನಾದರೂ ಹಿಂಪಡೆಯಲು ತವಕಿಸುತ್ತಿದ್ದಾರೆ.

ಇಂತಹ ಕಷ್ಟದ ಸಮಯದಲ್ಲಿ ಸರ್ಕಾರಗಳು, ಟೋಲ್‌ ಗುತ್ತಿಗೆದಾರರು ರೈತರಿಗೆ ನೆರವಾಗಿ ಮಾನವೀಯತೆ ಮೆರೆಯಬೇಕೇ ವಿನಾ ದೌರ್ಜನ್ಯ ಮೆರೆಯುವುದು, ಸುಲಿಗೆ ಮಾಡುವುದು ಬಿಡಬೇಕು ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ.

’ಜಿಲ್ಲೆಯ ರೈತರು ತಾವು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಬೆಂಗಳೂರಿನ ಗ್ರಾಹಕರಿಗೆ ತಲುಪಿಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವಾಗ ಟೋಲ್‌ಗಳಲ್ಲಿ ರೈತರಿಂದ ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ‘ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಹೇಳಿದರು.

’ಕೊರೊನಾದಿಂದ ಹೊತ್ತಿನ ತುತ್ತಿಗಾಗಿ ಜನರು ಪರದಾಡುತ್ತಿರುವ ಈ ಹೊತ್ತಿನಲ್ಲಿ ದೇಶದಾದ್ಯಂತ ಜನರು ಸಮಾಜಕ್ಕೆ ತಮ್ಮ ಕೈಲಾದ ಸಹಾಯ ಮಾಡುವ ಮಾನವೀಯತೆ ಮೆರೆಯುತ್ತಿರುವ ಈ ಹೊತ್ತಿನಲ್ಲಿ ಕೋಟ್ಯಧಿಪತಿ ಗುತ್ತಿಗೆದಾರರು ಬಡ ರೈತರಿಂದ ಟೋಲ್‌ಗಳಲ್ಲಿ ದೌರ್ಜನ್ಯದಿಂದ ಟೋಲ್‌ ವಸೂಲಿ ಮಾಡುವುದು ಅಕ್ಷಮ್ಯ ಅಪರಾಧ. ಇದಕ್ಕೆ ಕಡಿವಾಣ ಹಾಕಬೇಕು‘ ಎಂದು ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT