ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪ್ರದೀಪ್ ಈಶ್ವರ್ ಅವರ ಗೆಲುವಿಗೆ ತಾವೇ ಕಾರಣ ಎನ್ನುವಂತೆ ಕೆಲವು ಮುಖಂಡರು ನಡೆದುಕೊಳ್ಳುತ್ತಿದ್ದಾರೆ. ಈ ಮುಖಂಡರು ಛಾಯಾ ಶಾಸಕರ (ಶ್ಯಾಡೊ ಎಂಎಲ್‌ಎ) ರೀತಿ ವರ್ತಿಸಲು ಸಹ ಪ್ರಯತ್ನಿಸಿದರು. ಆದರೆ ಆ ‘ಪ್ರಮುಖ’ ಮುಖಂಡರ ಶ್ಯಾಡೊ ಶಾಸಕರ ‘ಗತ್ತಿಗೆ’ ಪ್ರದೀಪ್ ಅವರು ಕಡಿವಾಣ ಹಾಕುತ್ತಿದ್ದಂತೆ ಈ ‘ಪ್ರಮುಖ’ ಮುಖಂಡರು ಬಿಜೆಪಿ ಮಾಜಿ ಶಾಸಕ ಡಾ.ಕೆ.ಸುಧಾಕರ್ ಅವರ ಜೊತೆ ‘ರಹಸ್ಯ’ ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಗಳು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವ್ಯಾಪಕವಾಗಿಯೇ ಹರಿದಾಡುತ್ತಿದೆ.
ಬೆಂಗಳೂರಿನಲ್ಲಿ ಸುಧಾಕರ್ ಜೊತೆ ಕಾಂಗ್ರೆಸ್‌ನ ‘ಪ್ರಮುಖ’ ಮುಖಂಡರು ಸಭೆ ನಡೆಸಿರುವುದು ಶಾಸಕ ಪ್ರದೀಪ್ ಈಶ್ವರ್ ಅವರ ಗಮನಕ್ಕೂ ಬಂದಿದೆ ಎನ್ನುತ್ತವೆ ಶಾಸಕರ ಆಪ್ತ ಮೂಲಗಳು. ಸುಧಾಕರ್ ಅವರು ಶಾಸಕರಾಗಿದ್ದ ವೇಳೆ ಅವರನ್ನು ವಾಚಾಮಗೋಚರವಾಗಿ ಟೀಕಿಸುತ್ತಿದ್ದ ಕೆಲವು ಕಾಂಗ್ರೆಸ್ ನಾಯಕರು ಈಗ ಮಾಜಿ ಸಚಿವರ ಸಂಪರ್ಕದಲ್ಲಿಯೇ ಇದ್ದಾರೆ ಎನ್ನುತ್ತವೆ ಮೂಲಗಳು.
ಪ್ರದೀಪ್ ಈಶ್ವರ್ ಅವರು ಶಾಸಕರಾದ ನಂತರ ಕೆಲವು ಮುಖಂಡರು ಅಧಿಕಾರಿಗಳಿಗೆ ಕರೆ ಮಾಡಿ ಈ ಕೆಲಸ ಮಾಡಿ ಆ ಕೆಲಸ ಮಾಡಿ ಎಂದು ತಾಕೀತು ಸಹ ಮಾಡಿದ್ದರು. ಈ ವಿಚಾರಗಳು ಶಾಸಕರಿಗೆ ಸಹ ತಿಳಿದು ತಮ್ಮ ಪರಿಧಿಯಲ್ಲಿಯೇ ಎಲ್ಲ ಕೆಲಸಗಳು ನಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರ ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ಮುಖಂಡರಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯಿತು. ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳ ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ.
‘ಕಾಂಗ್ರೆಸ್ ಮುಖಂಡರೇ ಸುಧಾಕರ್ ಅವರನ್ನು ಭೇಟಿ ಮಾಡಿದ್ದಾರೆ’ ಎನ್ನುವ ಮೂಲಕ ಪ್ರದೀಪ್ ಈಶ್ವರ್ ತಮ್ಮ ವಿರುದ್ಧ ಚಿಕ್ಕಬಳ್ಳಾಪುರದ ಕೆಲವು ಕಾಂಗ್ರೆಸ್ ನಾಯಕರು ‘ಗುಂಪುಗಾರಿಕೆ’ಯಲ್ಲಿ ತೊಡಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಶಾಸಕರಿಲ್ಲದೆ ಸಭೆ: ಚಿಕ್ಕಬಳ್ಳಾಪುರ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಪ್ರದೀಪ್ ಈಶ್ವರ್ ಮತ್ತು ಪಕ್ಷದ ಕೆಲವು ನಾಯಕರ ನಡುವೆ ಅಂತರ ಸಹ ಏರ್ಪಟ್ಟಿದೆ. ಪಕ್ಷ ನಿಷ್ಠರಿಗೆ ಅಧಿಕಾರ ದೊರೆಯಬೇಕು ಎಂದು ಶಾಸಕರು ಪ್ರತಿಪಾದಿಸುತ್ತಿದ್ದರೆ, ಯಾರಾದರೂ ಆಗಲಿ ಕಾಂಗ್ರೆಸ್‌ಗೆ ಅಧಿಕಾರ ದೊರೆಯಬೇಕು ಎನ್ನುವ ಭಾವನೆ ಕೆಲವು ಮುಖಂಡರಲ್ಲಿ ಇದ್ದಂತಿದೆ.
ನಗರಸಭೆ ಸದಸ್ಯರೊಬ್ಬರ ಮನೆಯಲ್ಲಿ ಇತ್ತೀಚೆಗೆ ನಡೆಸ ನಗರಸಭೆ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಶಾಸಕರು ಪಾಲ್ಗೊಂಡಿರಲಿಲ್ಲ. ಹೀಗೆ ತಮ್ಮ ವಿರುದ್ಧದ ಬೆಳವಣಿಗೆಗಳನ್ನು ಗಮನಿಸಿರುವ ಶಾಸಕರು ಅಂತಹ ನಾಯಕರನ್ನು ದೂರವಿಡುತ್ತಿದ್ದಾರೆ. ಈ ‘ಅತೃಪ್ತ’ರು ಶಾಸಕರ ವಿರೋಧಿ ಪಾಳಯದ ಜೊತೆ ಸಂಪರ್ಕ ಸಹ ಸಾಧಿಸುತ್ತಿದ್ದಾರೆ.
ಲೋಕಸಭೆಗೂ ಎರಡು ಬಣ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ‘ಬಣ ರಾಜಕಾರಣ’ 2024ರ ಲೋಕಸಭೆ ಚುನಾವಣೆಗೂ ತಟ್ಟುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಮುಖಂಡರು ರಕ್ಷಾ ರಾಮಯ್ಯ ಮತ್ತು ವೀರಪ್ಪ ಮೊಯಲಿ ಅವರ ಪರ ಬಹಿರಂಗವಾಗಿ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.