ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಕಚೇರಿಗೆ ಲೋಕಾಯುಕ್ತ ಎಸ್‌.ಪಿ ಭೇಟಿ

ಕಡತಗಳ ಪರಿಶೀಲನೆ: ಇ– ಖಾತೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ
Last Updated 1 ಫೆಬ್ರುವರಿ 2023, 4:39 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಲೋಕಾಯುಕ್ತ ಕಚೇರಿಯಲ್ಲಿ ನೋಂದಾಯಿತ ಪ್ರಕರಣಗಳ ಬಗ್ಗೆ ಪರಿಶೀಲನೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಪವನ್ ನೆಜ್ಜೂರ್ ಮಂಗಳವಾರ ಪುರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ಮಾಡಿದರು.

ಪಟ್ಟಣದ ಆಯಜ್ ಖಾನ್ ಎಂಬುವವರು ತಮ್ಮ ಜಮೀನಿನನ್ನು ಇ–ಖಾತೆ ಮಾಡಿಕೊಡುವಂತೆ 2 ವರ್ಷಗಳ ಹಿಂದೆ ಪುರಸಭೆ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಂದಿನಿಂದ ಇದುವರೆಗೂ ಪುರಸಭೆ ಅಧಿಕಾರಿಗಳು ಇ ಖಾತೆ ಮಾಡಿಸಿರಲಿಲ್ಲ. ಹಿಗಾಗಿ ಅಯಾಜ್ ಖಾನ್ ಚಿಕ್ಕಬಳ್ಳಾಪುರ ಲೋಕಾಯುಕ್ತರಿಗೆ ಹಾಗೂ ಇತ್ತೀಚೆಗೆ ಉಪ ಲೋಕಾಯುಕ್ತರಿಗೆ ಸಮಸ್ಯೆಯ ಬಗ್ಗೆ ಅರ್ಜಿ ನೀಡಿದ್ದರು.

ಈ ಸಂಬಂಧ ಪುರಸಭೆ ಕಚೇರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಪವನ್ ನೆಜ್ಜೂರು ಆಗಮಿಸಿ ದೂರುದಾರ ಆಯಾಜ್ ಖಾನ್ ಅವರ ಸಮಸ್ಯೆ ಆಲಿಸಿದರು. 2 ವರ್ಷಗಳಿಂದ ಇ ಖಾತೆಯನ್ನು ಪುರಸಭೆ ಅಧಿಕಾರಿಗಳು ಮಾಡಿಲ್ಲ. ಸಮರ್ಪಕವಾದ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ವಿನಾಃಕಾರಣ ತೊಂದರೆ ನೀಡಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ಲೋಕಾಯುಕ್ತ ಪೊಲೀಸರು ನಮಗೆ ನ್ಯಾಯ ದೊರಕಿಸಿಕೊಡುವಂತೆ ಆಯಾಜ್ ಖಾನ್ ಮನವಿ ಮಾಡಿದರು.

ಆಯಾಜ್ ಖಾನ್ ಅವರ ಕಡತದ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್‌ಗೆ ಲೋಕಾಯುಕ್ತ ಅಧೀಕ್ಷಕರು ಮಾಹಿತಿ ಕೇಳಿದರು. ಕೆ.ಮಧುಕರ್ ಪ್ರತಿಕ್ರಿಯಿಸಿ ದೂರುದಾರರ ಕಡತಗಳಿಗೆ ಸಂಬಂಧಿಸಿದಂತೆ 4 ಕಡತಗಳು ಇವೆ. ಈಗಾಗಲೇ ಒಂದು ಕಡತ ಮಾಡಲಾಗಿದೆ. ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ತಾಂತ್ರಿಕ ದೋಷ ಇರುವುದರಿಂದ ಇ ಖಾತೆ ಸಮರ್ಪಕವಾಗಿ ಆಗುತ್ತಿಲ್ಲ. ಲಾಗಿನ್ ತೊಂದರೆ ಆಗಿದೆ. ಒಂದು ವಾರದ ಒಳಗೆ ಕಡತಗಳನ್ನು ಪರಿಶೀಲಿಸಿ ಇ ಖಾತೆಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣದ ಪುರಸಭಾ ವ್ಯಾಪ್ತಿಯ 64 ಪುರಸಭಾ ನಿವೇಶನಗಳಲ್ಲಿ ಉದ್ಯಾನಗಳಿಗೆ ಮೀಸಲಿಡಲಾಗಿದೆ. ಆದರೆ ಕೆಲ ನಿವೇಶನಗಳನ್ನು ರಾಜಕೀಯ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಿ ಜಮೀನುಗಳನ್ನು ಅಧಿಕಾರಿಗಳು ಉಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು, ಲೋಕಾಯುಕ್ತರಿಗೆ ಮನವಿ ಮಾಡಿದರು. ಪಟ್ಟಣದ ಸಬ್ ರಿಜಿಸ್ಟರ್ ಕಚೇರಿ ಮುಂದೆ ಸರ್ಕಾರಿ ಗುಂಡುತೋಪನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ಬಿ.ಎ.ಬಾಬಾಜಾನ್ ಮನವಿ ಮಾಡಿದರು.

ಲೋಕಾಯುಕ್ತ ಅಧೀಕ್ಷಕ ಪವನ್ ನೆಜ್ಜೂರು ಮಾತನಾಡಿ, ಲೋಕಾಯುಕ್ತ ಕಚೇರಿಯಲ್ಲಿ ಪಟ್ಟಣದ ಸಾರ್ವಜನಿಕರು ಪುರಸಭೆಗೆ ಸಂಬಂಧಿಸಿದಂತೆ ಕೆಲ ದೂರುಗಳನ್ನು ದಾಖಲು ಮಾಡಿದ್ದರು. ಪರಿಶೀಲನೆ ಮಾಡಲು ಭೇಟಿ ನೀಡಿ, ಕಡತಗಳನ್ನು, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ದೂರುದಾರರಿಗೆ ಖಾತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಚೇರಿಗಳಿಗೆ ಸಲ್ಲಿಸಿರುವ ಅರ್ಜಿದಾರರನ್ನು ಅಧಿಕಾರಿಗಳು, ಸಿಬ್ಬಂದಿಯವರು ವಿನಾಃಕಾರಣ ತಿರುಗಾಡಿಸಬಾರದು. ವಿನಾಃಕಾರಣ ತೊಂದರೆ ನೀಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಶೀಲನೆ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿ ಮೋಹನ್ ಎನ್ ಹೆಡ್ಡನವರ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT