ಚಿಂತಾಮಣಿ: ‘ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ₹2 ಕೋಟಿಯನ್ನು ಅಂಗವಿಕಲರಿಗಾಗಿಯೇ ಬಳಕೆ ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ತಾಲ್ಲೂಕು ಪಂಚಾಯಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನ ವಿಶೇಷಚೇನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಫಲಾನುಭವಿಗಳಿಗೆ 13 ಯಂತ್ರಚಾಲಿತ ದ್ವಿಚಕ್ರವಾಹನ ಹಾಗೂ ಅಂಗವಿಕಲರನ್ನು ವಿವಾಹವಾಗುವವರಿಗೆ ₹50 ಸಾವಿರ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.
‘ಕಳೆದ ವರ್ಷದ ಪ್ರದೆಶಾಭಿವೃದ್ಧಿ ನಿಧಿಯ ಸಂಪೂರ್ಣ ಅನುದಾನವನ್ನು ಅಂಗವಿಕಲರಿಗೆ ದ್ವಿಚಕ್ರವಾಹನ ನೀಡಲು ಬಳಕೆ ಮಾಡಲಾಗುವುದು. ಈಗಾಗಲೇ ಪಟ್ಟಿ ತಯಾರಿಸಲಾಗಿದೆ. ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹20 ಲಕ್ಷ ಮಾತ್ರ ಬಳಸಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಅನುಮತಿಗೆ ಆರ್ಥಿಕ ಇಲಾಖೆಗೆ ಮತ್ತು ಮುಖ್ಯಮಂತ್ರಿ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.
ವಾಹನಗಳನ್ನು ಪಡೆದ ಫಲಾನುಭವಿಗಳು ಅವುಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ವಾಹನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜತೆಗೆ ಪ್ರತಿನಿತ್ಯ ಬಳಕೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಉಪವಿಭಾಗಾಧಿಕಾರಿ ಅಶ್ವಿನ್, ಜಿಲ್ಲಾ ಮೀನುಗಾರಿಕೆ ಇಲಾಖೆ ಅಧಿಕಾರಿ ನಾಗೇಂದ್ರಬಾಬು, ವಿಶೇಷ ಚೇತನರ ಕಲ್ಯಾಣಾಧಿಕಾರಿ ಡಿ.ಎಲ್.ಜಗದೀಶ್, ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಇಒ ಎಸ್.ಆನಂದ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಉಪಸ್ಥಿತರಿದ್ದರು.