ಮಂಗಳವಾರ, ಡಿಸೆಂಬರ್ 1, 2020
24 °C

ಜೆಡಿಎಸ್ ಪಕ್ಷ ಸೇರಲ್ಲ: ಎಂ. ರಾಜಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ಕ್ಷೇತ್ರದ ಜನತೆಯ ಸಮಸ್ಯೆ ಪರಿಹರಿಸುವ ಜೊತೆಗೆ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಎಲ್ಲರಿಗೂ ತನ್ನ ಕೈಯಲ್ಲಾಗುವ ಸಹಾಯ ಮಾಡಲು ಸದಾ ಸಿದ್ಧನಾಗಿದ್ದೇನೆ’ ಎಂದು ಮಾಜಿ ಶಾಸಕ ಎಂ. ರಾಜಣ್ಣ ಹೇಳಿದರು.

ನಗರದ ವಿಜಯಲಕ್ಷ್ಮಿ ವೃತ್ತದಲ್ಲಿರುವ ಎಚ್.ಕೆ.ಜಿ.ಎನ್. ಶಾದಿಮಹಲ್‌ನಲ್ಲಿ ಭಾನುವಾರ ತಮ್ಮ ಅಭಿಮಾನಿಗಳಿಂದ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರು ಮಾತನಾಡಿದರು.

‘2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗಿ ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿಯಿದೆ. ಆದರೆ, 2018ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರು ನನ್ನ ವಿಚಾರದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ‘ಬಿ’ ಫಾರಂನಿಂದ ವಂಚಿತನಾದೆ. ಪಕ್ಷೇತರನಾಗಿ ಸ್ಪರ್ಧಿಸಿ ಸೋಲಬೇಕಾಯಿತು. ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನನಗೆ ಆಹ್ವಾನ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೂ, ಯಾವುದೇ ಆಹ್ವಾನ ಬರಲಿಲ್ಲ. ಹಾಗಾಗಿ, ನನ್ನ ಜೀವವಿರುವವರೆಗೂ ಜೆಡಿಎಸ್ ಸೇರುವುದಿಲ್ಲ’ ಎಂದರು.

ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ತೀರ್ಮಾನಿಸಲಾಗಿದೇಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕ್ಷೇತ್ರದ ಜನತೆಯ ಭವಿಷ್ಯದ ಜೊತೆಗೆ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಸಚಿವರು ಹಾಗೂ ಬೇರೆ ಪಕ್ಷಗಳ ಶಾಸಕರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ತಮ್ಮ ಅಭಿಮಾನಿಗಳು ಸೇರಿದಂತೆ ಮುಖಂಡರೊಂದಿಗೆ ಚರ್ಚಿಸಿ ಬೇರೆ ಪಕ್ಷ ಸೇರುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

ಮಾಜಿ ಶಾಸಕ ಎಸ್. ಮುನಿಶಾಮಪ್ಪ ಹಾಗೂ ತಮ್ಮ ಬೆಂಬಲಿಗರ ಒತ್ತಾಯದ ಮೇರೆಗೆ ಕ್ಷೇತ್ರದಾದ್ಯಂತ ಸಂಚರಿಸಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ. ದೀಪಾವಳಿ ನಂತರ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎನ್ನುವುದನ್ನು ಬಹಿರಂಗಪಡಿಸಲಾಗುವುದು ಎಂದರು.

ಮುಖಂಡರಾದ ದೊಣ್ಣಹಳ್ಳಿ ರಾಮಣ್ಣ, ರಹಮತ್‌ ಉಲ್ಲಾ, ಕೆ.ಎಸ್. ಕನಕಪ್ರಸಾದ್, ಮುರಳಿ, ಆದಿಲ್, ಸಲಾಂ, ಮುಕ್ತಿಯಾರ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು