ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.8ರಂದು ಮಾದಿಗ ಚೈತನ್ಯ ರಥಯಾತ್ರೆ

Last Updated 5 ಮಾರ್ಚ್ 2021, 15:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾ.8ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಮಾದಿಗ ಚೈತನ್ಯ ರಥಯಾತ್ರೆಯಲ್ಲಿ ಜಿಲ್ಲೆಯ 20 ಸಾವಿರ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ಮಾದಿಗ ಸಮುದಾಯದ ಮುಖಂಡ ಎಚ್.ಆನಂದ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ಜಾರಿಗೊಳಿಸದ ಕಾರಣ ಮಾದಿಗ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ. ಹಲವು ಹೋರಾಟ ಮಾಡಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

‘ನಾವು ನ್ಯಾಯಬದ್ಧವಾದ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಮ್ಮ ಸಮುದಾಯದ 18 ಶಾಸಕರು ವಿಧಾನಸಭೆಯಲ್ಲಿ ಇರಬೇಕಿತ್ತು. ಆದರೆ ಆರು ಜನರು ಮಾತ್ರ ಇದ್ದೇವೆ. ನಮ್ಮನ್ನು ಭೋವಿ, ಕೊರಮ ಸೇರಿದಂತೆ ಸ್ಪರ್ಶ ಜಾತಿಯ ಜನರು ತುಳಿಯುತ್ತಿದ್ದಾರೆ’ ಎಂದು ದೂರಿದರು.

ಸದಾಶಿವ ಅವರ ಆಯೋಗವು ಆರು ವರ್ಷ ಐದು ತಿಂಗಳು ರಾಜ್ಯದಾದ್ಯಂತ ಪ್ರವಾಸ ಮಾಡಿ ವರದಿ ಸಿದ್ಧಗೊಳಿಸಿದೆ. ಮಾದಿಗರು, ಹೊಲೆಯರು, ಭೋವಿ, ಲಂಬಾಣಿ ಹೀಗೆ ವಿವಿಧ ಪರಿಶಿಷ್ಟ ಜಾತಿಯ ಜನರಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎನ್ನುವ ಬಗ್ಗೆ ತಿಳಿಸಿದೆ. ರಾಜ್ಯದಲ್ಲಿ 96.60 ಲಕ್ಷ ಮಂದಿ ಸಮುದಾಯದವರು ಇದ್ದಾರೆ ಎಂದರು.

’ತುಳಿತಕ್ಕೆ ಒಳಗಾಗಿದ್ದೇವೆ. ನಮ್ಮ ಹಕ್ಕ ನಾವು ಕೇಳುತ್ತಿದ್ದೇವೆ. ಆದರೆ ವರದಿ ಜಾರಿಯ ಬಗ್ಗೆ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಖಜಾಂಚಿ ಮಂಜುನಾಥ್ ಮಾತನಾಡಿ, ’ನಮ್ಮ ಹಕ್ಕುಗಳು, ಸೌಲಭ್ಯಗಳು ಬೇರೆಯವರ ಪಾಲಾಗುತ್ತಿವೆ. ಶಿಕ್ಷಣ, ರಾಜಕೀಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತುಳಿತಕ್ಕೆ ಒಳಗಾಗಿದ್ದೇವೆ‘ ಎಂದರು.

’ಸದಾಶಿವ ಆಯೋಗದ ವರದಿ ಜಾರಿಗೊಳಿಸದ ಹೊರತು ನಾವು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ, ಮತ ಚಲಾಯಿಸುವುದಿಲ್ಲ ಎಂದು ತೀರ್ಮಾನಿಸಬೇಕಾಗಿದೆ‘ ಎಂದು ಹೇಳಿದರು.

ಜಿಲ್ಲೆಯ ಎಲ್ಲ ತಾಲ್ಲೂಕಿಗಳಿಂದಲೂ ಮಾ.8ರ ಚೈತನ್ಯ ರಥಯಾತ್ರೆಗೆ ಸಮುದಾಯದವರು ತೆರಳುವರು ಎಂದು ಮಾಹಿತಿ ನೀಡಿದರು.

ಮುಖಂಡರಾದ ವೇಣು, ಜಯಕುಮಾರ್, ಅಂದಾನಹಳ್ಳಿ ವೆಂಕಟೇಶ್, ಎಂ.ಲಕ್ಷ್ಮಿನಾರಾಯಣ, ಬಿ.ಗಂಗಾಧರ್, ಜಿ.ರಮೇಶ್, ನಾಗರಾಜ್, ಜೀವಿಕಾ ನಾರಾಯಣಸ್ವಾಮಿ, ಮುನಿಸ್ವಾಮಿ, ಜಯರಾಮ್, ಜಿ.ಶಿವಪ್ಪ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT