ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ರಾಜಕೀಯ ಬಿಡಿ; ವೃತ್ತಿ ಪಾವಿತ್ರ್ಯ ಕಾಪಾಡಿ

ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕಿವಿಮಾತು
Last Updated 6 ಸೆಪ್ಟೆಂಬರ್ 2021, 8:59 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಶಿಕ್ಷಕರು ರಾಜಕೀಯ ಮಾಡದೆ ವೃತ್ತಿಯ ಪಾವಿತ್ರ್ಯ ಕಾ‍‍ಪಾಡಿಕೊಂಡು ಗುರು ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ನವಸಮಾಜ ಕಟ್ಟಲು ಮುಂದಾಗಬೇಕು’ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೆಲವು ಶಿಕ್ಷಕರು ಶಾಲೆಗಳಿಗೆ ಹೋಗದೆ ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಕರು ಒಂದು ರಾಜಕೀಯ ಪಕ್ಷಕ್ಕೆ ಸೀಮಿತರಾಗಬಾರದು. ಇದರಿಂದ ಗ್ರಾಮಗಳಲ್ಲಿ ರಾಜಕೀಯ ಆರಂಭವಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತದೆ. ರಾಜಕೀಯರಹಿತರಾಗಿ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.

‘ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಗುರುಭವನ ಹಾಗೂ ಶಿಕ್ಷಕರ ಭವನ ನಿರ್ಮಿಸಲು ಹೇಳಿದ್ದೇನೆ. ಸೂಕ್ತ ಜಾಗ ಗುರುತಿಸಿ ಭವನ ಕಟ್ಟಿಸಲು ಸಿದ್ಧನಿದ್ದೇನೆ. ಶಿಕ್ಷಕರ ದಿನಾಚರಣೆಯಂದು ಮಾತ್ರ ಗುರುಭವನ ನೆನಪಾಗುತ್ತದೆ. ನಂತರ ಅಧಿಕಾರಿಗಳು, ಶಿಕ್ಷಕರ ಸಂಘಟನೆಯವರು ಮರೆಯುತ್ತಾರೆ. ಮುಂದಿನ ತಿಂಗಳಿನಿಂದ ಭವನ ಕಟ್ಟಿಸಲು ಯೋಜನೆ ರೂಪಿಸಬೇಕಾಗಿದೆ’ ಎಂದು ತಿಳಿಸಿದರು.

ತಾಲ್ಲೂಕಿನ ಮಿಟ್ಟೇಮರಿ, ಗೂಳೂರು ಹೋಬಳಿ ಕೇಂದ್ರಗಳಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ಕೋರ್ಸ್ ಆರಂಭಿಸಲಾಗಿದೆ. ಸರ್ಕಾರಿ ಪಾಲಿಟೆಕ್ನಿಕ್, ಐಟಿಐ ಕಾಲೇಜುಗಳನ್ನು ಹಂತ ಹಂತದಲ್ಲಿ ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ. ನಯಾಜ್ ಅಹಮದ್ ಮಾತನಾಡಿ, ಶಿಕ್ಷಕ, ಶಿಕ್ಷಕಿಯರನ್ನು ಬೋಧನೆಯ ಜೊತೆಗೆ ಸಭೆಗಳು, ಹತ್ತಾರು ಯೋಜನೆಗಳ ಕಾರ್ಯಕ್ಕೆ ಬಳಕೆ ಮಾಡುತ್ತಿರುವುದರಿಂದ ಶೈಕ್ಷಣಿಕ ಪ್ರಗತಿಗೆ ಕುತ್ತು ಬರುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿಹೆಚ್ಚು ಅಂಕ ಪಡೆದ ಸರ್ಕಾರಿ, ಅನುದಾನಿತ, ಅನುದಾನರಹಿತ, ವಸತಿ ಶಿಕ್ಷಣ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕ, ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಿ.ಎ. ದಿವಾಕರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಎನ್. ಮಂಜುನಾಥಸ್ವಾಮಿ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಡಿ.ಎನ್. ಸುಕನ್ಯಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಹನುಮಂತರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ವಿ. ರಂಗಾರೆಡ್ಡಿ, ಪುರಸಭಾ ಉಪಾಧ್ಯಕ್ಷ ಎ. ಶ್ರೀನಿವಾಸ್, ಸ್ಥಾಯಿಸಮಿತಿ ಅಧ್ಯಕ್ಷ ಎ. ನಂಜುಂಡಪ್ಪ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಮೀರ್ ಜಾನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರವಣಪ್ಪ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎನ್. ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT