ಶುಕ್ರವಾರ, ಆಗಸ್ಟ್ 12, 2022
20 °C
ಮಹಾನಾಯಕ ಧಾರಾವಾಹಿಗೆ ಅಡ್ಡಿ; ಕ್ರಮಕ್ಕೆ ಆಗ್ರಹ

ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ ಮಹಾನಾಯಕ ಪ್ರಸಾರ ಮಾಡುತ್ತಿರುವ ಕನ್ನಡ ವಾಹಿನಿಯೊಂದರ ಮುಖ್ಯಸ್ಥರಿಗೆ ಬೆದರಿಕೆ ಹಾಕುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ
ನಡೆಸಿದರು.

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕವಾಲಿ ವೆಂಕಟರವಣಪ್ಪ ಮಾತನಾಡಿ, ‘ರಾಷ್ಟ್ರ ಮತ್ತು ಅಂತರರಾಷ್ಟ್ರೀಯವಾಗಿ ಮನ್ನಣೆ ಪಡೆದಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀವನ ಚರಿತ್ರೆ ಪ್ರಸಾರ ಮಾಡುವ ಹಕ್ಕಿಲ್ಲವೆ? ಜೀವನಚರಿತ್ರೆ ಪ್ರಸಾರ ಮಾಡುವುದರಿಂದ ಯಾರಿಗೆ ತೊಂದರೆಯಾಗುತ್ತದೆ. ಅಂಬೇಡ್ಕರ್ ಬದುಕಿದ್ದಾಗಲೂ ತೊಂದರೆ ನೀಡಿದರು. ಅವರು ಮೃತಪಟ್ಟ ಎಷ್ಟೋ ವರ್ಷಗಳ ನಂತರವೂ ಕಿರುಕುಳ ಮುಂದುವರೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ಸಂವಿಧಾನ ಅನುಷ್ಠಾನಗೊಂಡು 70 ವರ್ಷ ಕಳೆದರೂ, ಆಡಳಿತ ನಡೆಸಿದ ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಶಾಸಕಾಂಗ, ಕಾರ್ಯಾಂಗ, ಸಂವಿಧಾನ ವಿರೋಧಿ ಧೋರಣೆ ಅನುಸರಿಸಿಕೊಂಡು ಬರುತ್ತಿವೆ. ಬಹುಸಂಖ್ಯಾತರನ್ನು ರಾಜಕೀಯ, ಆರ್ಥಿಕ, ಸಾಮಾಜಿಕ ಸಮಾನತೆಯಿಂದ ದೂರಮಾಡಲಾಗಿದೆ. ವಿದ್ಯೆ, ಅಧಿಕಾರ, ನೆಲ, ಜಲ, ಆರೋಗ್ಯ, ಸಂಪತ್ತು ದೇಶದ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆಯಾಗಲಿಲ್ಲ’ ಎಂದು ದೂರಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣ ದುರುಪಯೋಗವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಖಾಸಗಿ ಕ್ಷೇತ್ರಗಳಲ್ಲೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಜಾರಿಗೆ ತರಬೇಕು. ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿ ತಡೆ ಹಿಡಿದಿರುವ ವಿದ್ಯಾರ್ಥಿವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಭಾಗೀಯ ಸಂಚಾಲಕ ಕೆ.ಲಕ್ಷ್ಮಿನಾರಾಯಣ್ ಆಗ್ರಹಿಸಿದರು.

ಮುಖಂಡ ಮೇಲೂರು ಮಂಜುನಾಥ್, ದೇವಮ್ಮ, ಶ್ರೀರಾಮಪ್ಪ, ಚಲಪತಿ, ರಾಮಕೃಷ್ಣ, ಆಂಜಮ್ಮ, ಕೆ.ಎಂ.ಮುನಿ ಆಂಜಿನಪ್ಪ, ಕೋರ್ಲಪರ್ತಿ ರಮೇಶ್, ತಳಗವಾರ ಕದಿರಪ್ಪ, ಮಹ್ಮದ್ ಪುರ ರಮೇಶ್, ಮೂರ್ತಿ, ಕೇರಳ ವೆಂಕಟೇಶ್, ಟೈಲರ್ ಮೂರ್ತಿ, ನರೇಶ್, ನರಸಿಂಹಮೂರ್ತಿ, ಸಿ.ವಿ.ಲಕ್ಷ್ಮಿನಾರಾಯಣ, ನಾರಾಯಣಸ್ವಾಮಿ, ಆಟೊಶಂಕರ, ವೆಂಕಟರಮಣ ವರಲಕ್ಷ್ಮಿ, ರಾಮು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು