ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಚೇನಹಳ್ಳಿ ಗ್ರಾ.ಪಂ ಚುನಾವಣೆ ಇಂದು: ಅಧಿಕಾರ ಹಿಡಿಯಲು ಕಸರತ್ತು

ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರತಿಷ್ಠೆಯ ಕಣ
Last Updated 29 ಮಾರ್ಚ್ 2021, 3:45 IST
ಅಕ್ಷರ ಗಾತ್ರ

ಗೌರಿಬಿದನೂರು: ಜಿಲ್ಲೆಯ ಅರೆಮಲೆನಾಡು ಎಂಬ ಖ್ಯಾತಿ ಪಡೆದಿರುವ ಮಂಚೇನಹಳ್ಳಿ ನೂತನ ತಾಲ್ಲೂಕು ಕೇಂದ್ರದಲ್ಲಿ ಇಂದು (ಮಾರ್ಚ್‌ 29) ನಡೆಯಲಿರುವ ಗ್ರಾ.ಪಂ ಚುನಾವಣೆಯು ಸ್ಥಳೀಯ ಮುಖಂಡರು ಮತ್ತು ಆಡಳಿತ ಪಕ್ಷದ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಗ್ರಾ.ಪಂ ಸದಸ್ಯರ ಅವಧಿ ಪೂರ್ಣಗೊಳ್ಳದ ಕಾರಣ ಈ ಹಿಂದೆ ನಡೆಯಬೇಕಾಗಿದ್ದ ಸ್ಥಳೀಯ ಚುನಾವಣೆಯು ಸುಮಾರು 3 ತಿಂಗಳು ತಡವಾಗಿ ನಡೆಯುತ್ತಿದೆ. ಮಂಚೇನಹಳ್ಳಿ ನಗರ ಹಾಗೂ ಬಂಡಿರಾಮನಹಳ್ಳಿ ಸೇರಿ ಒಟ್ಟು 6 ಕ್ಷೇತ್ರದ 9 ಮತಗಟ್ಟೆಗಳಲ್ಲಿ ಮತದಾನದ ಪ್ರಕ್ರಿಯೆ ನಡೆಯಲಿದ್ದು, 20 ಸ್ಥಾನಗಳಿಗೆ 54 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪ್ರತಿ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಖಾಡದಲ್ಲಿದ್ದು, ಗ್ರಾ.ಪಂ ಅಧ್ಯಕ್ಷ ಸ್ಥಾನವು ಈಗಾಗಲೇ ಬಿಸಿಎಂ ಮಹಿಳಾ ಸ್ಥಾನಕ್ಕೆ ಮೀಸಲಿರುವ ಕಾರಣ ಈ‌ ಬಾರಿಯ ಚುನಾವಣೆಯು ಎಲ್ಲರಿಗೂಪ್ರತಿಷ್ಠೆಯಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಓಲೈಸಿಕೊಳ್ಳಲು ಹಲವು ಸುತ್ತುಗಳಲ್ಲಿ ಅಬ್ಬರದ ಪ್ರಚಾರ ಮಾಡಿದ್ದು, ಮತದಾರರ ಅಮೂಲ್ಯವಾದ ಮತ ಪಡೆಯಲು ಈಗಾಗಲೇ ಆಹಾರ ಧಾನ್ಯ, ಕೋಳಿ, ಕುಕ್ಕರ್, ಪ್ಯಾನ್, ಸೀರೆ ಸೇರಿದಂತೆ ಇನ್ನಿತರ ವಸ್ತುಗಳ ಜತೆಯಲ್ಲಿ ಕುರುಡು ಕಾಂಚಾಣವನ್ನು ಕಾಣಿಕೆಯಾಗಿ‌ ನೀಡಿ ಮತದಾರರನ್ನು ಸೆಳೆಯಲು‌ ಮುಂದಾಗಿದ್ದಾರೆ.

ಸಚಿವರ ಆದೇಶದಂತೆ ಸುತ್ತಲಿನ ಹಳೇಹಳ್ಳಿ, ಪುರ, ಗೌಡಗೆರೆ, ಶ್ಯಾಂಪುರ, ಮಿನಕನಗುರ್ಕಿ, ಜರಬಂಡಹಳ್ಳಿ ಗ್ರಾ.ಪಂ.ಯಲ್ಲಿನ ಬಿಜೆಪಿ ಕಾರ್ಯಕರ್ತರು ಮಂಚೇನಹಳ್ಳಿಯಲ್ಲಿ ವಾರ್ಡ್‌ವಾರು ಬೀಡು ಬಿಟ್ಟಿದ್ದು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಕೆಲವು ವಾರ್ಡ್‌ಗಳಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಮಣಿಸಲು ಕಸರತ್ತು ನಡೆಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಂಚೇನಹಳ್ಳಿ ಗ್ರಾ.ಪಂ. ಅನ್ನು ತನ್ನ ತೆಕ್ಕೆಗೆ ಪಡೆಯುವುದು ಪ್ರತಿಷ್ಠೆಯಾಗಿದೆ. ಇದಕ್ಕಾಗಿ ನಿರಂತರವಾಗಿ ಕಾರ್ಯಕರ್ತರು ಮತ್ತು‌ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದು, ಇಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಈಗಾಗಲೇ ಈ‌ ಭಾಗದ ಒಟ್ಟು 6 ಗ್ರಾ.ಪಂ.ಗಳಲ್ಲಿ ಕೇಸರಿ‌ ಬಾವುಟ ಹಾರಿಸಿದ್ದು, ಉಳಿದಂತೆ ನೂತನ ತಾಲ್ಲೂಕು ಕೇಂದ್ರದಲ್ಲಿರುವ ಮಂಚೇನಹಳ್ಳಿಯನ್ನು ವಶಕ್ಕೆ ಪಡೆಯಲುಯತ್ನಿಸುತ್ತಿದ್ದಾರೆ.

ಅಭ್ಯರ್ಥಿಗಳ‌ ಕಸರತ್ತು: ಚುನಾವಣೆಗೂ ಮುನ್ನವೇ ಆಯೋಗವುಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿರುವುದರಿಂದ ಕಣದಲ್ಲಿರುವ ಅಭ್ಯರ್ಥಿಗಳ‌ ಚಿತ್ತ ಅಧ್ಯಕ್ಷಗಾದಿಯ ಮೇಲಿದೆ. ಇನ್ನು ಆಡಳಿತ ಪಕ್ಷವಾಗಿರುವ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಹೊಂದಾಣಿಕೆ ‌ಮಾಡಿಕೊಂಡು ಬಿಜೆಪಿಯನ್ನು‌ ಮಣಿಸಿ ಅಧ್ಯಕ್ಷ ಸ್ಥಾನ ಪಡೆಯಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಮತದಾರರು‌ ಯಾರ ಪರವಾಗಿ ಮತ ನೀಡಿ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT