ಮಂಗಳವಾರ, ಮೇ 24, 2022
22 °C
ಜಿಲ್ಲಾಡಳಿತದಿಂದ ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ ಜಯಂತಿ

ಜಯಂತಿ ಆಚರಣೆಗೆ ಸೀಮಿತವಾಗದಿರಲಿ: ತಹಶೀಲ್ದಾರ್ ರವಿಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಜಯಂತಿಗಳು ಆಚರಣೆಗೆ ಸೀಮಿತವಾಗದೇ, ಜಾತಿ-ಧರ್ಮದ ತಾರತಮ್ಯ
ವನ್ನು ಹೋಗಲಾಡಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು’ ಎಂದು ತಹಶೀಲ್ದಾರ್ ರವಿಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸವಿತಾ ಸಮಾಜ ಮತ್ತು ಶಿವಾಜಿ ಮಹಾರಾಜರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸವಿತಾ ಮಹರ್ಷಿ ಮತ್ತು ಛತ್ರಪತಿ ಶಿವಾಜಿಯವರ ಜಯಂತಿಯನ್ನು ಜಿಲ್ಲಾಡಳಿತ ಕಛೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಸವಿತಾ ಮಹರ್ಷಿ ಮತ್ತು ಛತ್ರಪತಿ ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರು ಮಾತನಾಡಿದರು.

‘ಭಾರತದ ಇತಿಹಾಸಕ್ಕೆ ಸವಿತಾ ಮಹರ್ಷಿ ಮತ್ತು ಛತ್ರಪತಿ ಶಿವಾಜಿಯವರ ಕೊಡುಗೆ ಅಪಾರವಾದದ್ದು, ಯಾವುದೇ ಪ್ರತಿಫಲವನ್ನು ಅಪೇಕ್ಷೆ ಮಾಡದೇ ಶ್ರಮಿಸಿದಂತಹ ಮಹನೀಯರು’ ಎಂದು ಹೇಳಿದರು.

ಬಾಗೇಪಲ್ಲಿ ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥ ಪ್ರೊ. ಡಾ. ಕೇಶವಮೂರ್ತಿ ಮಾತನಾಡಿ, ‘ಛತ್ರಪತಿ ಶಿವಾಜಿ ಅವರು ಕರ್ತವ್ಯ ಪಾಲನೆ, ಆದರ್ಶ ಪಾಲನೆಯಿಂದ ಮಾತ್ರ ದೇಶದ ಕಲ್ಯಾಣಕ್ಕಾಗಿ ಶ್ರಮಿಸಿದಂತಹ ಮಹನೀಯರು ಎಂದರು. ಸಾಂಸ್ಕೃತಿಕ ಪರಂಪರೆಯ ವೀರ-ಯೋಧ, ಚಕ್ರವರ್ತಿ ಎಂದೇ ಪ್ರಖ್ಯಾತಿಗಳಿಸಿದಂತಹ ಗಣ್ಯರು ಎಂದು ಹೇಳಿದರು.

ಜಚನೀ ಕಾಲೇಜಿನ ಉಪನ್ಯಾಸಕ ನರಸಿಂಹಮೂರ್ತಿ ಮಾತನಾಡಿ, ‘ಛತ್ರಪತಿ ಶಿವಾಜಿ ಅವರು ಸರ್ವ ಸ್ವತಂತ್ರದಿಂದ ಆಡಳಿತ ನಡೆಸಿದಂತಹ ಮಹಾರಾಜರು. ಇನ್ನೂ ಯುದ್ಧ, ಹೋರಾಟ ಮಾಡುವ ನಿಟ್ಟಿನಲ್ಲಿ ಅವರು ಮಾಡಿದ ಸಮಾಜದ ಸೇವೆ ಮತ್ತು ಸಾಮರ್ಥ್ಯದ ಬಗ್ಗೆ ತಿಳಿಸಿದರು. ಸಮಾಜಕ್ಕಾಗಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಗಳಿಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಶ್ರಮವಹಿಸಬೇಕು’ ಎಂದರು.

ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಗಿರಿಜಾ ಶಂಕರ್, ಸವಿತಾ ಸಮಾಜದ ತಾಲೂಕಿನ ಅಧ್ಯಕ್ಷರಾದ ನಟರಾಜ್, ಮರಾಠ ಕ್ಷತ್ರಿಯ ಸಮುದಾಯದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು