ಮಂಗಳವಾರ, ನವೆಂಬರ್ 19, 2019
29 °C
ಎಂಸಿಐ ಮಾರ್ಗಸೂಚಿ ಉಲ್ಲಂಘನೆ ಆರೋಪ, ಸದ್ದಿಲ್ಲದೆ ಅಧಿಕಾರಿಗಳಿಂದ ಅನರ್ಹ ಶಾಸಕ ಸುಧಾಕರ್ ಅವರ ಹುಟ್ಟೂರು ಬಳಿ ಜಾಗ ಪರಿಶೀಲನೆ

ಚಿಕ್ಕಬಳ್ಳಾಪುರ| ವೈದ್ಯಕೀಯ ಕಾಲೇಜು ಸ್ಥಳಾಂತರಕ್ಕೆ ಹುನ್ನಾರ?

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಂಜೂರಾದ ಸರ್ಕಾರಿ ವೈದ್ಯಕೀಯ ಕಾಲೇಜ ಅನ್ನು ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಮಾರ್ಗಸೂಚಿ ಉಲ್ಲಂಘಿಸಿ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಅವರ ಹುಟ್ಟೂರು ಪೇರೇಸಂದ್ರ ಸಮೀಪ ಸ್ಥಾಪಿಸಲು ಸದ್ದಿಲ್ಲದೆ ಹುನ್ನಾರವೊಂದು ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಸಮನ್ವಯಾಧಿಕಾರಿಗಳಾದ ಡಾ.ಆರ್.ಲೋಹಿತ್‌ ಕುಮಾರ್, ಡಾ.ರವಿಕಿರಣ್ ಕಿಸಾನ್ ಅವರ ನೇತೃತ್ವದ ತಂಡ ಜಿಲ್ಲಾಧಿಕಾರಿ ಆರ್.ಲತಾ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ ಅವರೊಂದಿಗೆ ಗುರುವಾರ ಪೇರೇಸಂದ್ರದ ಬಳಿಯ ಅರೂರು ಗ್ರಾಮಕ್ಕೆ ಭೇಟಿ ನೀಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಜಾಗ ಪರಿಶೀಲಿಸಿರುವುದು ಈ ಆರೋಪಕ್ಕೆ ಪುಷ್ಟಿ ನೀಡಿದೆ.

‘ಎಂಸಿಐ ಮಾರ್ಗಸೂಚಿ ಪ್ರಕಾರ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜ ಅನ್ನು ಜಿಲ್ಲಾ ಆಸ್ಪತ್ರೆಯಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಾಪಿಸಬೇಕು’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್‌ಕುಮಾರ್. ಆದರೆ ಗುರುವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ ಸ್ಥಳವು ಜಿಲ್ಲಾ ಆಸ್ಪತ್ರೆಯಿಂದ ಸುಮಾರು 18 ಕಿ.ಮೀ ದೂರದಲ್ಲಿದೆ.

2014ರಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಆಗಿತ್ತು. ಕಾಲೇಜು ಕಟ್ಟಡಕ್ಕಾಗಿ ಜಿಲ್ಲಾಡಳಿತ ತಾಲ್ಲೂಕಿನ ಅಣಕನೂರು ಗ್ರಾಮದ ಅಮಾನಿ ಗೋಪಾಲಕೃಷ್ಣ ಕೆರೆ ಪ್ರದೇಶದಲ್ಲಿ 22 ಎಕರೆ ಭೂಮಿ ಮಂಜೂರು ಮಾಡಿತ್ತು. ಈ ಕ್ರಮ ಪ್ರಶ್ನಿಸಿ ಎರಡೂವರೆ ವರ್ಷಗಳ ಹಿಂದೆ ಲೋಕಾಯುಕ್ತದಲ್ಲಿ ದೂರೊಂದು ದಾಖಲಾಗಿತ್ತು. ಅದರ ವಿಚಾರಣೆ ಕೂಡ ಮುಂದುವರಿದಿದೆ. ಆದರೆ ಈವರೆಗೆ ಕಾಲೇಜು ಕಟ್ಟಡಕ್ಕೆ ಪರ್ಯಾಯ ಜಾಗ ಗುರುತಿಸುವ ಕೆಲಸವಾಗಿರಲಿಲ್ಲ.

ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾದ ಸುಧಾಕರ್ ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಕನಕಪುರ ತಾಲ್ಲೂಕಿಗೆ ಮಂಜೂರಾಗಿ, ಟೆಂಡರ್‌ ಪ್ರಕ್ರಿಯೆ ಕೂಡ ಆಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಯೋಜನೆಯನ್ನೇ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದಾರೆ.

ಅದರ ಬೆನ್ನಲ್ಲೇ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಚಟುವಟಿಕೆಗಳು ಗರಿಗೆದರಿವೆ. ಇದೀಗ ಸುಧಾಕರ್ ಅವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಜಿಲ್ಲಾ ಕೇಂದ್ರದಿಂದ ದೂರದಲ್ಲಿ ಕಾಲೇಜು ತೆರೆಯಲು ಹೊರಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಉಂಟು ಮಾಡಿದೆ.

ಈ ಬಗ್ಗೆ ಡಾ.ಅನಿಲ್‌ಕುಮಾರ್ ಅವರನ್ನು ವಿಚಾರಿಸಿದರೆ, ‘ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರದಲ್ಲಿ ಶಾಸಕರು, ಜಿಲ್ಲಾಧಿಕಾರಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರಂತೆ ನಾವು ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸುಧಾಕರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಭೇಟಿ ಸ್ಥಳದ ಹೆಸರು ಗೊತ್ತಿಲ್ಲ!

ಭೇಟಿಯ ಬಗ್ಗೆ ಡಾ.ಆರ್.ಲೋಹಿತ್‌ ಕುಮಾರ್ ಅವರನ್ನು ವಿಚಾರಿಸಿದಾಗ ಅರೂರು ಭೇಟಿಯ ಗುಟ್ಟು ಬಿಟ್ಟುಕೊಡದ ಅವರು, ‘ನಾವು ಜಿಲ್ಲಾ ಆಸ್ಪತ್ರೆ ಮತ್ತು ಡಿಎಚ್‌ಒ ಅವರ ಕಚೇರಿಗೆ ಮಾತ್ರ ಭೇಟಿ ನೀಡಿದ್ದೇವೆ. ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿ ಅವರ ಬಳಿ ಮಾತನಾಡಿ’ ಎಂದರು. ಈ ಕುರಿತು ಜಿಲ್ಲಾಧಿಕಾರಿ ಆರ್.ಲತಾ ಅವರನ್ನು ಪ್ರಶ್ನಿಸಿದರೆ, ‘ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ನಿನ್ನೆ ನಾಲ್ಕೈದು ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಆದರೆ ಆ ಸ್ಥಳಗಳ ಹೆಸರು ಗೊತ್ತಿಲ್ಲ. ಬಾಯಿಗೆ ಬರುತ್ತಿಲ್ಲ’ ಎಂದರು.

* ಈ ವಿಚಾರವನ್ನು ಅಧಿಕಾರಿಗಳು ನನ್ನ ಗಮನಕ್ಕೆ ತಂದಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಜಿಲ್ಲಾ ಕೇಂದ್ರ ಬಿಟ್ಟು ದೂರದಲ್ಲಿ ಸ್ಥಾಪಿಸುವುದು ಸರಿಯಲ್ಲ.

–ಎಚ್.ವಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)