ಬುಧವಾರ, ಅಕ್ಟೋಬರ್ 23, 2019
27 °C
‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಸಲಹೆ

ಖಿನ್ನತೆಗೆ ಜೀವನ ಶೈಲಿ ಬದಲಾವಣೆಯೇ ಮದ್ದು

Published:
Updated:
Prajavani

ಚಿಕ್ಕಬಳ್ಳಾಪುರ: ‘ಆಧುನಿಕ ಜೀವನ ಶೈಲಿಯಲ್ಲಿ ಜನರು ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕಡೆಗಣಿಸಿ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡು ನೆಮ್ಮದಿ, ಶಾಂತಿ ಕಳೆದುಕೊಂಡು ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ಇವತ್ತು ತುರ್ತಾಗಿ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ನಿಸರ್ಗದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಪ್ರತಿ ನಿತ್ಯ ಮುಂಜಾನೆ ಸಮಯದಲ್ಲಿ ಧ್ಯಾನ, ಯೋಗ, ಶ್ಲೋಕಗಳ ಪಠನೆ ಮಾಡಬೇಕು. ಅಲ್ಲದೆ, ಇತರರೊಂದಿಗೆ ಪರಸ್ಪರ ಬಾಂಧ್ಯವನ್ನು ಬೆಳೆಸಿಕೊಂಡು ಮಾನಸಿಕ ಖಿನ್ನತೆ, ಆತಂಕ, ಅಂಜಿಕೆಯಂತಹ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ದುರಾಲೋಚನೆಗಳಿಂದ ದೂರ ಉಳಿಯಬೇಕು’ ಎಂದು ತಿಳಿಸಿದರು.

‘ನಮ್ಮ ಪೂರ್ವಜರು ಅವಿಭಕ್ತ ಕುಟುಂಬದಲ್ಲಿ ಇದ್ದುಕೊಂಡು ಕುಟುಂಬ ಸದಸ್ಯರೊಂದಿಗೆ ಬೆರತು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಂಡು ಸುಖಮಯ ಜೀವನ ನಡೆಸುತ್ತಿದ್ದರು. ಈಗ ವಿಭಕ್ತ ಕುಟುಂಬಗಳು ಹೆಚ್ಚುತ್ತಿದ್ದು, ಒಂಟಿಯಾಗಿ ಜೀವನ ಸಾಗಿಸುತ್ತಾ ಬದುಕಿನಲ್ಲಿ ಎದುರಾಗುವ ನೋವುಗಳಿಗೆ ಹೆಚ್ಚಿನ ರೀತಿಯಲ್ಲಿ ತಲೆಕೆಡಿಸಿಕೊಂಡು ಮಾನಸಿಕ ಕಾಯಿಲೆಗಳಿಗೆ ಗುರಿಯಾಗುವವರು ಹೆಚ್ಚುತ್ತಿದ್ದಾರೆ. ಒಂಟಿತನದ ಬದುಕಿನಿಂದ ಹೊರಬಂದು ಸಾಮಾಜಿಕ ವ್ಯವಸ್ಥೆಯಲ್ಲಿ ಬೆರೆಯುವ ಅಗತ್ಯವಿದೆ’ ಎಂದರು.

‘ವಿಶ್ವದಲ್ಲಿಯೇ ಭಾರತವು ಮಾನಸಿಕ ಅನಾರೋಗ್ಯದಲ್ಲಿ 21ನೇ ಸ್ಥಾನವನ್ನು ಪಡೆದಿದೆ. ಲುಥಿಯಾನ, ರಷ್ಯಾ, ಅಮೆರಿಕಾ ದೇಶಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಮುಂದಿನ ದಿನಗಳಲ್ಲಿ ಭಾರತವು ಮಾನಸಿಕ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯನ್ನು ಕಾಣಬೇಕು. ಈ ನಿಟ್ಟಿನಲ್ಲಿ 16-ರಿಂದ 20 ವಯೋಮಾನದ ಯುವ ಜನತೆಯು ಯಾವುದೇ ಸಮಸ್ಯೆಗಳು ಎದುರಾದರೂ ಆತ್ಮಹತ್ಯೆಯೊಂದೇ ಪರಿಹಾರ ಅಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜ್, ರಾಜ್ಯಮಟ್ಟದ ಮಾನಸಿಕ ಆರೋಗ್ಯ ಕಾರ್ಯಕ್ರಮದ ಉಪನಿರ್ದೇಶಕಿ ಡಾ.ಪಿ.ರಜನಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್, ಜಿಲ್ಲಾ ಮನೋರೋಗ ತಜ್ಞ ಡಾ.ಡಿ.ಎನ್.ಕಿಶೋರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞರಾದ ಡಾ.ಜಿ.ಹೇಮಂತ್‌ಕುಮಾರ್, ಡಾ. ಎಂ.ಸುಬ್ರಮಣ್ಯಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್ ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)