ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ ಬೆಲೆ ಹೆಚ್ಚಳ ಕೈಬಿಡಲು ಕೇಂದ್ರ ಸೂಚಿಸಿಲ್ಲ

Last Updated 11 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣಕ್ಕೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಮಾಡಬಾರದು ಎಂದು ಕೇಂದ್ರ ಸರ್ಕಾರವು ಕೇಳಿಕೊಂಡಿಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಹೇಳಿವೆ.

2017ರ ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಇಂಧನ ಬೆಲೆ ಹೆಚ್ಚಿಸದಂತೆ ಸರ್ಕಾರ ಅನೌಪಚಾರಿಕವಾಗಿ ತೈಲ ಮಾರಾಟ ಸಂಸ್ಥೆಗಳಿಗೆ ಸೂಚಿಸಿತ್ತು ಎಂದು ವರದಿಯಾಗಿತ್ತು.  ಆ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳದ ಕಾರಣಕ್ಕೆ ಪ್ರತಿ ಲೀಟರ್‌ ಇಂಧನ ಬೆಲೆಯನ್ನು 45 ಪೈಸೆಯಷ್ಟು ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದ್ದರೂ ಅದನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.

ಡಿಸೆಂಬರ್‌ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಇಂಧನಗಳ ಬೆಲೆಯು ಪ್ರತಿ ದಿನ 1 ರಿಂದ 3 ಪೈಸೆಗಳಷ್ಟು ಕಡಿಮೆಯಾಗುತ್ತಿತ್ತು. ಡಿಸೆಂಬರ್‌ 14ಕ್ಕೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಬೆಲೆ ಏರಿಕೆಯಾಗತೊಡಗಿತು. ಈ ವಿದ್ಯಮಾನವು ಬೆಲೆ ಏರಿಕೆ ಮಾಡದಂತೆ ಸರ್ಕಾರ ಕೇಳಿಕೊಂಡಿತ್ತು ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿತ್ತು.

ಕಾಕತಾಳೀಯವಾಗಿ ಬುಧವಾರ ಇಂಧನ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಈಗ, ಕರ್ನಾಟಕದಲ್ಲಿನ ಚುನಾವಣೆ ಮುಗಿಯುವವರೆಗೆ ಪ್ರತಿ ಲೀಟರ್‌ಗೆ ₹ 1ರಷ್ಟು ಹೊರೆಯನ್ನು ಭರಿಸಬೇಕು ಎಂದು ಇಂಡಿಯನ್‌ ಆಯಿಲ್‌ (ಐಒಸಿ), ಹಿಂದೂಸ್ತಾನ್‌ ಪೆಟ್ರೋಲಿಯಂ (ಎಚ್‌ಪಿಸಿಎಲ್‌)  ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ಗಳಿಗೆ (ಬಿಪಿಸಿಎಲ್‌) ಸರ್ಕಾರ ಕೇಳಿಕೊಂಡಿದೆ ಎಂದು ವರದಿಯಾಗಿದೆ.

‘ಪ್ರತಿ ದಿನ ಬೆಲೆ ಪರಿಷ್ಕರಣೆ ಕೈಬಿಡುವ ಬಗ್ಗೆ ಸರ್ಕಾರದಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ’ ಎಂದು ಐಒಸಿ ಅಧ್ಯಕ್ಷ ಸಂಜೀವ್‌ ಸಿಂಗ್‌ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಕಚ್ಚಾ ತೈಲ ಬೆಲೆ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸದಿರಲು ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ’ ಎಂದು ಎಚ್‌ಪಿಸಿಎಲ್‌ ಅಧ್ಯಕ್ಷ ಎಂ. ಕೆ. ಸುರಾನಾ ಅವರೂ ಹೇಳಿದ್ದಾರೆ.

ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ ಅವರು, ಈ ಕುರಿತ ಪ್ರಶ್ನೆಗ ಉತ್ತರಿಸಲು ನಿರಾಕರಿಸಿದ್ದಾರೆ.

ಷೇರು ಬೆಲೆ ಕುಸಿತ: ಇಂಧನಗಳ ಬೆಲೆ ಏರಿಕೆ ಮಾಡದಂತೆ ಸರ್ಕಾರ ಸೂಚಿಸಿದೆ ಎನ್ನುವ ವರದಿಗಳ ಕಾರಣಕ್ಕೆ ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿ  ಐಒಸಿ ಷೇರಿನ ಬೆಲೆ ಶೇ 7.6 ಮತ್ತು ಎಚ್‌ಪಿಸಿಎಲ್‌ನ ಬೆಲೆ ಶೇ 8.3ರಷ್ಟು ಕಡಿಮೆಯಾಗಿದೆ.

ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಇಂಧನ ಬೆಲೆ ಏರಿಕೆ ತಡೆಗಟ್ಟಲು ಎಕ್ಸೈಸ್‌ ಡ್ಯೂಟಿ ತಗ್ಗಿಸುವ ಸಾಧ್ಯತೆಯನ್ನು ಹಣಕಾಸು ಕಾರ್ಯದರ್ಶಿ ಹಸ್ಮುಖ ಆಧಿಯಾ ಅವರು ಕಳೆದ ವಾರ ತಳ್ಳಿ ಹಾಕಿದ್ದರು.

ದಿನ  ಸಂಸ್ಥೆ ಪೆಟ್ರೋಲ್‌  ಡೀಸೆಲ್‌ (ಬೆಲೆ ₹ಗಳಲ್ಲಿ)

9–4–2018 ಐಒಸಿ 75.16 66.03

10–4–2018 ಐಒಸಿ 75.15 66.06

11–4–2018 ಐಒಸಿ 75.15 66.06

***

27.1 ಡಾಲರ್‌: 2016ರಲ್ಲಿನ ಪ್ರತಿ ಬ್ಯಾರೆಲ್‌ ಕಚ್ಚಾತೈಲದ ಬೆಲೆ

70 ಡಾಲರ್‌: ಸದ್ಯದ ಬೆಲೆ ಮಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT