ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಧೋರಣೆಗೆ ಸದಸ್ಯರು ಕೆಂಡಾಮಂಡಲ

ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರ ಮೊದಲ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಆಡಳಿತ ವೈಖರಿ ವಿರುದ್ಧ ಅಸಮಾಧಾನ ಸ್ಫೋಟ
Last Updated 21 ಜನವರಿ 2020, 15:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿಗೆ ಎಂ.ಬಿ.ಚಿಕ್ಕನರಸಿಂಹಯ್ಯ ಅವರು ನೂತನ ಅಧ್ಯಕ್ಷರಾದ ಬಳಿಕ ಮಂಗಳವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಧೋರಣೆ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯ ಸಭೆಯಲ್ಲಿ ಮುಖ್ಯವಾಗಿ ಸ್ವಚ್ಛ ಭಾರತ್, ಕೃಷಿ, ತೋಟಗಾರಿಕೆ, ಮತ್ತು ಶಿಕ್ಷಣ ಸೇರಿದಂತೆ ಕೆಲವೇ ಇಲಾಖೆಗಳ ಪ್ರಗತಿ ಪರಿಶೀಲನಾ ಕಾರ್ಯ ನಡೆಯಿತು. ಪ್ರತಿ ಇಲಾಖೆಯ ಮುಖ್ಯಸ್ಥರು ಸಭೆಯಲ್ಲಿ ಮಾಹಿತಿ ನೀಡುತ್ತಿದ್ದ ವೇಳೆ ಸದಸ್ಯರು ಅಧಿಕಾರಿಗಳ ವಿಳಂಬ ಧೋರಣೆಗೆ ಉದಾಹರಣೆ ನೀಡುತ್ತ, ಅಸಮಾಧಾನ ವ್ಯಕ್ತಪಡಿಸುವ ಜತೆಗೆ ಕ್ರಮಕ್ಕೆ ಆಗ್ರಹಿಸಿದರು.

ಸಭೆಯ ಆರಂಭದಲ್ಲಿಯೇ ಮಂಚೇನಹಳ್ಳಿ ಕ್ಷೇತ್ರದ ಸದಸ್ಯ ಪಿ.ಎನ್.ಪ್ರಕಾಶ್‌ ಅವರು ಸಭೆಯಲ್ಲಿ ಅಜೆಂಡಾ, ಹಿಂದಿನ ಸಭೆಯ ಅನುಪಾಲನಾ ವರದಿ ನೀಡದಿರುವುದನ್ನು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು. ‘ಅಜೆಂಡಾ ಇರದ ಸಭೆಗೆ ಗೊತ್ತು ಗುರಿ ಇರುವುದಿಲ್ಲ. ಆದ್ದರಿಂದ ಈ ಸಭೆ ವ್ಯರ್ಥ ಮುಂದೂಡಿ, ಮುಂದಿನ ಸಭೆಯಲ್ಲಿ ಅಜೆಂಡಾ ಇಟ್ಟುಕೊಂಡು ಚರ್ಚೆ ನಡೆಸೋಣ’ ಎಂದು ಆಗ್ರಹಿಸಿದರು.

ಈ ವೇಳೆ ಪ್ರಕಾಶ್‌ ಅವರನ್ನು ಸಮಾಧಾನಪಡಿಸಲು ಮುಂದಾದ ಅಧ್ಯಕ್ಷರು ಈ ಹಿಂದಿನ ಸಭೆ ನಡೆದು ಒಂಬತ್ತು ತಿಂಗಳು ಕಳೆದಿವೆ. ಹೀಗಾಗಿ ಹಿಂದಿನದೆಲ್ಲ ಸದಸ್ಯರು ಮರೆತಿರುತ್ತಾರೆ ಎಂಬ ಕಾರಣಕ್ಕೆ ಅನುಪಾಲನಾ ವರದಿ ಬೇಡ ಎಂದು ಹೇಳಿದ್ದೆ. ಮುಂದಿನ ಸಭೆಯಲ್ಲಿ ತಪ್ಪದೆ ಅಜೆಂಡಾ, ಅನುಪಾಲನಾ ವರದಿ ಪ್ರತಿ ಕೊಡಿಸುವುದಾಗಿ ಭರವಸೆ ನೀಡಿದರು.

ಅದರ ಬೆನ್ನಲ್ಲೇ ನಂದಿ ಕ್ಷೇತ್ರದ ಸದಸ್ಯ ಕೆ.ಎಂ.ಮುನೇಗೌಡ, ‘ಕಳೆದ ಬಾರಿ ಕರೆದಿದ್ದ ಸಾಮಾನ್ಯ ಸಭೆ ರದ್ದಾದ ವಿಚಾರವನ್ನು ಅಧಿಕಾರಿಗಳು ಸದಸ್ಯರ ಗಮನಕ್ಕೆ ತರಲಿಲ್ಲ. ಅಧಿಕಾರಿಗಳು ಸದಸ್ಯರನ್ನು ಇಷ್ಟೊಂದು ಕೀಳಾಗಿ ನೋಡುವುದು ಸರಿಯಲ್ಲ’ ಎಂದು ಆಕ್ಷೇಪಿಸುತ್ತಿದ್ದಂತೆ, ಅನೇಕ ಸದಸ್ಯರು ಮುನೇಗೌಡರ ಮಾತಿಗೆ ಸಹಮತ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ತಮ್ಮದೇ ದಾಟಿಯಲ್ಲಿ ದೂರುಗಳ ಸುರಿಮಳೆಗೈದರು.

ಸಭೆಯಲ್ಲಿದ್ದ ಯೋಜನಾಧಿಕಾರಿ ಮಾಧುರಾಮ್ ಸೇರಿದಂತೆ ಕೆಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಸಭೆ ರದ್ದಾದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ ಎಂದು ಸಮರ್ಥನೆ ನೀಡಲು ಮುಂದಾಗಿ ಮತ್ತಷ್ಟು ಆಕ್ರೋಶಕ್ಕೆ ಗುರಿಯಾದರು. ಈ ವೇಳೆ ಗರಂ ಆದ ಚಿಕ್ಕನರಸಿಂಹಯ್ಯ ಅವರು ಯೋಜನಾಧಿಕಾರಿ ಮಾಧುರಾಮ್ ಅವರನ್ನು ಉದ್ದೇಶಿಸಿ ಇನ್ನು ಮೇಲೆ ಸದಸ್ಯರಿಗೆ ಸಭೆಗೆ ಸಂಬಂಧಪಟ್ಟ ವಿಚಾರಗಳನ್ನು ತಲುಪಿಸುವುದು ನಿಮ್ಮ ಜವಾಬ್ದಾರಿ ಎಂದು ತಾಕೀತು ಮಾಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ ಅವರು ಸಭೆಗೆ ತಮ್ಮ ಇಲಾಖೆಯ ಪ್ರಗತಿಯ ಮಾಹಿತಿ ನೀಡುತ್ತಿದ್ದ ವೇಳೆ ಚರ್ಚೆಗೆ ಬಂದ ಹಿಂದಿನ ಹಗರಣ, ಕೃಷಿಹೊಂಡ, ಟಾರ್ಪಾಲ್‌ ವಿತರಣೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯ ವಿಚಾರ ಚರ್ಚೆಗೆ ಇಂಬು ನೀಡಿ ಸದಸ್ಯರ ಕಿಡಿನುಡಿಗಳಿಂದಾಗಿ ಕೆಲ ಹೊತ್ತು ಸಭೆಯಲ್ಲಿ ಬಿಸಿ ವಾತಾವರಣ ಸೃಷ್ಟಿಸಿತ್ತು.

ಬಟ್ಲಹಳ್ಳಿ ಕ್ಷೇತ್ರದ ಸದಸ್ಯ ಸುಬ್ಬಾರೆಡ್ಡಿ ಮಾತನಾಡಿ, ‘ಚಿಂತಾಮಣಿ ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಅಧಿಕಾರಿಗಳು ಕೃಷಿ ಹೊಂಡ, ಟಾರ್ಪಾಲ್‌ ನೀಡದೆ, ದುಡ್ಡು ಕೊಟ್ಟವರಿಗೆ ಮಂಜೂರು ಮಾಡುವ ಕೆಲಸ ಮಾಡುತ್ತಿದ್ದಾರೆ. ಅರ್ಹರಿಗೆ ನೀಡುವಂತೆ ನಾವು ವಿಚಾರಿಸಿದರೆ ಯೋಜನೆ ನಿಂತು ಹೋಗಿದೆ ಎಂದು ಸುಳ್ಳು ಹೇಳುತ್ತಾರೆ. ಇನ್ನೊಂದೆಡೆ ಜೆಸಿಬಿ ಇಟ್ಟುಕೊಂಡಿರುವ ಒಬ್ಬ ವ್ಯಕ್ತಿ 40 ಕಡೆಗಳಲ್ಲಿ ಬೇನಾಮಿ ಹೆಸರುಗಳಲ್ಲಿ 40 ಕಡೆಗಳಲ್ಲಿ ಕೃಷಿ ಹೊಂಡ ತೆಗೆದರೆ ಅದಕ್ಕೆ ಅಧಿಕಾರಿಗಳು ಬಿಲ್‌ ಪಾವತಿಸುತ್ತಾರೆ. ನಮ್ಮ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದರ ಬೆನ್ನಲ್ಲೇ ಮಾತಿಗೆ ನಿಂತ ತಿಪ್ಪೇನಹಳ್ಳಿ ಕ್ಷೇತ್ರದ ಸದಸ್ಯ ಕೆ.ಸಿ.ರಾಜಾಕಾಂತ್, ‘ಕೃಷಿ ಇಲಾಖೆಯಲ್ಲಿ ಒಂದೂವರೆ ವರ್ಷದ ಹಿಂದೆ ಹನಿ ನೀರಾವರಿ ಯೋಜನೆಯಲ್ಲಿ ಅಧಿಕಾರಿಗಳು, ಕೆಲ ಏಜೆನ್ಸಿಗಳ ವ್ಯಕ್ತಿಗಳ ಮೂಲಕ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಕೋಟಿಗಟ್ಟಲೇ ದುರುಪಯೋಗಪಡಿಸಿಕೊಂಡಿದ್ದಾರೆ. ಆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರೂ ಈವರೆಗೆ ವರದಿ ನೀಡಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿಲ್ಲ. ಅಧಿಕಾರಿಗಳು, ರಾಜಕಾರಣಿಗಳು ತಪ್ಪಿತಸ್ಥರ ತಲೆ ಕಾಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ರೂಪಾ ಅವರು ಸ್ಪಷ್ಟನೆ ನೀಡಲು ಮುಂದಾದಾಗ ಅದಕ್ಕೆ ಒಪ್ಪದ ಸದಸ್ಯರು ಕೂಡಲೇ ಹಗರಣದ ತನಿಖೆಯ ವರದಿಯನ್ನು ಹಾಜರುಪಡಿಸುವಂತೆ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಚಿಕ್ಕನರಸಿಂಹಯ್ಯ ಅವರು, ‘ಜಂಟಿ ನಿರ್ದೇಶಕರು ಒಂದು ವಾರದಲ್ಲಿ ವರದಿ ನೀಡಬೇಕು. ಬಳಿಕ ತಾಲ್ಲೂಕಿಗೊಬ್ಬ ಸದಸ್ಯರನ್ನು ಒಳಗೊಂಡ ತಂಡದಿಂದ ಕ್ಷೇತ್ರ ಸಮೀಕ್ಷೆಯೊಂದನ್ನು ನಡೆಸಿ ವರದಿ ಪಡೆಯಲಾಗುತ್ತದೆ. ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸೋಣ’ ಎಂದು ಸದಸ್ಯರನ್ನು ಸಮಾಧಾನಪಡಿಸಿದರು.

ತೋಟಗಾರಿಕೆ ಇಲಾಖೆ ಮಾಹಿತಿ ಪಡೆಯುವ ವೇಳೆ ಕೂಡ ಕೆಲ ಸದಸ್ಯರು ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ಸದಸ್ಯರ ಗಮನಕ್ಕೆ ತರುವುದಿಲ್ಲ. ತಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿ ಅಕ್ರಮಗಳು ನಡೆದರೂ ನಮ್ಮ ಗಮನಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಜಿ.ನಾಗೇಶ್ ಮಾತನಾಡಿ, ‘ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ಸುಬ್ಬಾರೆಡ್ಡಿ ಮತ್ತು ಅಬ್ಲೂಡು ಕ್ಷೇತ್ರದ ಸದಸ್ಯ ಮುನಿಯಪ್ಪ ಅವರು, ‘ಅನೇಕ ಶಿಕ್ಷಕರು ಪಾಠ ಮಾಡುವುದು ಬಿಟ್ಟು ಹಾಲಿನ ಡೇರಿ, ಸೊಸೈಟಿಗಳ ಚುನಾವಣೆಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಶಾಸಕರು ಹಿಂದೆ ತಿರುಗುತ್ತ ಚುನಾವಣೆಯಲ್ಲಿ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರಕಾಶ್‌ ಅವರು, ‘ಶಾಲೆಗಳಲ್ಲಿ ಕೂಡ ಶಿಕ್ಷಕರಿಗೆ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷರು, ‘ಇನ್ನು ಮುಂದೆ ಯಾವುದೇ ಶಿಕ್ಷಕರು ಹಾಲಿನ ಡೇರಿ, ಸೊಸೈಟಿ ಚುನಾವಣೆಗಳಲ್ಲಿ ಭಾಗವಹಿಸದಂತೆ ನಿರ್ಣಯ ತೆಗೆದುಕೊಳ್ಳೋಣ’ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ. ನಿರ್ಮಲಾ ಮುನಿರಾಜು, ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT