ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೋಪ್, ಉತ್ತರ ಏಷಿಯಾ ಭಾಗದಿಂದ ವಲಸೆ ಬಂದ 'ಚುಕ್ಕೆ ಗದ್ದೆಗೊರವ'

Last Updated 30 ಡಿಸೆಂಬರ್ 2021, 5:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ದೂರದ ದೇಶದಲ್ಲಿರುವ ಭಾರತೀಯರು ತವರುಮನೆಗೆ ಆಗಮಿಸುವಂತೆ ದೂರ ತೀರಗಳಿಂದ ನಗರಕ್ಕೂ ಅತಿಥಿಗಳ ಆಗಮನ ಆರಂಭವಾತ್ತದೆ. ಆದರೆ ಈ ಅತಿಥಿಗಳು ಬರುವುದು ಊರ ಹೊರವಲಯದಲ್ಲಿನ ಕೆರೆಗಳಿಗೆ. ಹೌದು, ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳೇ ನಮ್ಮೂರಿಗೆ ಆಗಮಿಸುವ ಅತಿಥಿಗಳು. ನಗರದ ಹೊರವಲಯದ ಗೌಡಕೆರೆಗೆ ಯೂರೋಪ್ ಹಾಗೂ ಉತ್ತರ ಏಷಿಯಾ ಭಾಗದಿಂದ ವಲಸೆ ಹಕ್ಕಿಗಳು ಆಗಮಿಸಿವೆ.

ಅಡವಿ ಗದ್ದೆಗೊರವ ಎಂದು ಕರೆಯುವ ಈ ಹಕ್ಕಿಯನ್ನು ಇಂಗ್ಲಿಷ್‌ನಲ್ಲಿ ವುಡ್ ಅಥವಾ ಸ್ಪಾಟೆಡ್ ಸ್ಯಾಂಡ್‌ಪೈಪರ್ ಎನ್ನುತ್ತಾರೆ. ಮರ ಅಥವಾ ಚುಕ್ಕೆ ಗದ್ದೆಗೊರವ ಎಂಬ ಹೆಸರು ಕೂಡ ಇದಕ್ಕಿದೆ. ಕಂದು ಬಣ್ಣದ ಬೆನ್ನು ಮತ್ತು ರೆಕ್ಕೆಯ ಮೇಲೆ ಬಿಳಿ ಬಣ್ಣದ ಚುಕ್ಕೆಗಳಿವೆ. ಎದೆ ಮತ್ತು ಹೊಟ್ಟೆಯ ಭಾಗ ಬೆಳ್ಳಗಿದ್ದು ಚೂಪಾದ ಕೊಕ್ಕನ್ನು ಹೊಂದಿದೆ. ಕಣ್ಣಿನ ಮೇಲೆ ಬಿಳಿಯ ಹುಬ್ಬಿದೆ. ಹುಳು ಹುಪ್ಪಟೆಗಳನ್ನು ತಮ್ಮ ಚೂಪಾದ ಕೊಕ್ಕಿನಿಂದ ಬೆದಕುತ್ತಾ, ಚಿಫ್, ಚಿಫ್, ಚಿಫ್ ಎಂದು ತನ್ನದೇ ದಾಟಿಯಲ್ಲಿ ಕೂಗುತ್ತಾ ಒಂದೆಡೆಯಿಂದ ಮತ್ತೊಂದೆಡೆಗೆ ವೇಗವಾಗಿ ಹಾರುತ್ತಾ ಸದಾ ಚಟುವಟಿಯಿಂದ ಕೂಡಿರುವ ಹಕ್ಕಿಯಿದು.

ಬಹು ದೂರವಿರುವ ಯೂರೋಪ್ ಹಾಗೂ ಉತ್ತರ ಏಷಿಯಾದಿಂದ ಚಳಿಗಾಲದಲ್ಲಿ ವಲಸೆ ಬರುವ, ಹೆಚ್ಚು ಗುಂಪಾಗಿರುವ ಪಕ್ಷಿಗಳಿವು.

ಈ ಬಾರಿ ಮಳೆ ಚೆನ್ನಾಗಿ ಬಿದ್ದ ಪರಿಣಾಮ ಬಹುತೇಕ ಎಲ್ಲ ಕೆರೆಗಳಲ್ಲಿಯೂ ನೀರು ನಿಂತಿದೆ. ನೀರು ಅಲ್ಪಮಾತ್ರವಿರುವೆಡೆ ಆಹಾರ ಕೆದಕುವ ಈ ಹಕ್ಕಿಗಳು ಗೌಡನಕೆರೆಯನ್ನು ತಮ್ಮ ತಂಗುದಾಣ ಮಾಡಿಕೊಂಡಿವೆ. ತಮ್ಮ ಎಂದಿನ ರೂಢಿಯಂತೆ ಈ ಹಕ್ಕಿಗಳು ವಲಸೆ ಬಂದಿವೆ. ಯೂರೋಪ್ ಮತ್ತು ಉತ್ತರ ಏಷಿಯಾ ಭಾಗಗಳಲ್ಲಿ ಮೇ ಜೂನ್ ತಿಂಗಳಿನಲ್ಲಿ ಮೊಟ್ಟೆಯಿಟ್ಟು ಮರಿಮಾಡುವ ಈ ವುಡ್ ಅಥವಾ ಸ್ಪಾಟೆಡ್ ಸ್ಯಾಂಡ್‌ಪೈಪರ್ ಹಕ್ಕಿಗಳು ಅಲ್ಲಿ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಕಿ.ಮೀ ದೂರ ವಲಸೆ ಹೊರಡುತ್ತವೆ. ಅವುಗಳಿಗೆ ಸೂಕ್ತ ಆಹಾರ ಮತ್ತು ಅಪಾಯರಹಿತವಾತಾವರಣವಿರುವ ಕೆರೆಗಳಲ್ಲಿ ಕಾಣಸಿಗುತ್ತವೆ.

‘ಶಿಡ್ಲಘಟ್ಟದ ಗೌಡನಕೆರೆಗೆ ಈ ವರ್ಷದ ಮೊದಲ ದೂರದ ಅತಿಥಿಯಾಗಿ ವುಡ್ ಅಥವಾ ಸ್ಪಾಟೆಡ್ ಸ್ಯಾಂಡ್‌ಪೈಪರ್ ಹಕ್ಕಿ ಆಗಮಿಸಿದೆ. ಬಿಳಿಕೊಕ್ಕರೆಗಳ ಜತೆಯಲ್ಲಿ ಆಹಾರದ ಅನ್ವೇಷಣೆಯಲ್ಲಿ ತೊಡಗಿವೆ. ಗೌಡನಕೆರೆ ಏರಿಯ ಮೇಲೆ ವಾಹನದಲ್ಲಿ ಹೋಗುವಾಗಲೇ ನಾವು ಈ ಹಕ್ಕಿಗಳನ್ನು ನೋಡಿ ಆನಂದಿಸಬಹುದಾಗಿದೆ. ಈ ಬಾರಿ ಎಲ್ಲೆಡೆ ನೀರಿರುವುದರಿಂದ ಇನ್ನಷ್ಟು ವೈವಿಧ್ಯಮಯ ಹಕ್ಕಿಗಳನ್ನು ನಾವು ನಿರೀಕ್ಷಿಸಬಹುದಾಗಿದೆ’ ಎನ್ನುತ್ತಾರೆ ಉಪನ್ಯಾಸಕ ಅಜಿತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT