ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಮುಲ್; ನಾವು 2024ರವರೆಗೆ ನಿರ್ದೇಶಕರು’

ಹೈಕೋರ್ಟ್ ಮೆಟ್ಟಿಲೇರಿದ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರು
Last Updated 7 ಆಗಸ್ಟ್ 2022, 6:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ರಚನೆ ವಿಚಾರಗಳು ಆಗಾಗ್ಗೆ ಹೈಕೋರ್ಟ್ ಮೆಟ್ಟಿಲೇರುತ್ತಿವೆ. ಈಗ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ನಿರ್ದೇಶಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕೋಲಾರ ಜಿಲ್ಲೆಯ ಆರು ಮಂದಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಏಳು ಮಂದಿ 2019ರ ಮೇ 13ರಂದು ನಡೆದ ಚುನಾವಣೆಯಲ್ಲಿ ಕೋಚಿಮುಲ್ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದರು. ಈ ನಿರ್ದೇಶಕರ ಅಧಿಕಾರದ ಅವಧಿ ಐದು ವರ್ಷಗಳಾಗಿವೆ. 2024ರವರೆಗೆ ನಿರ್ದೇಶಕರ ಅವಧಿ ಇದೆ.

ಈ ನಡುವೆ ಸರ್ಕಾರ ಚಿಮುಲ್ ರಚನೆಯ ತರುವಾಯ ಮೂರು ತಿಂಗಳಲ್ಲಿ ಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಮುಂದಾಗಿತ್ತು. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ 7 ನಿರ್ದೇಶಕರು 2024ರವರೆಗೆ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿರ್ದೇಶಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ನೂತನವಾಗಿ ರಚನೆ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಿಮುಲ್) ಸಹಕಾರ ಸಂಘಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿಯಾಗಿದೆ. ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಮೂರು ತಿಂಗಳಲ್ಲಿ ಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿತ್ತು. ಚುನಾವಣೆ ನಡೆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಲಿದ್ದಾರೆ.

ಕೋಲಾರಕ್ಕೆ ಬೆಣ್ಣೆ ಚಿಕ್ಕಬಳ್ಳಾಪುರಕ್ಕೆ ಸುಣ್ಣ: ಜೂನ್‌ನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕವಾಗಿ ನೋಂದಣಿ ಆಗಿವೆ. ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಇದು ಚಿಕ್ಕಬಳ್ಳಾಪುರದ ನಿರ್ದೇಶಕರಲ್ಲಿ ಆಕ್ರೋಶ ಹುಟ್ಟಿಸಿದೆ.

ಕೋಲಾರ ಒಕ್ಕೂಟಕ್ಕೆ ಚುನಾವಣೆ ನಡೆಸದೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಯ್ಕೆಯಾದ ನಿರ್ದೇಶಕ ಸ್ಥಾನಗಳಿಗೆ ಸರ್ಕಾರ ಚುನಾವಣೆ ನಡೆಸಲು ಮುಂದಾಗಿದೆ. ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿಯು 2019ರ ಮೇ 13ರಿಂದ ಅಸ್ತಿತ್ವಕ್ಕೆ ಬಂದಿದ್ದು 2024ರ ಮೇ 12ಕ್ಕೆ ಅಂತ್ಯಗೊಳ್ಳುತ್ತದೆ ಎಂದು ಸರ್ಕಾರ ತಿಳಿಸಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ 2022ರ ಜೂ.22ರಂದು ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಕೋಲಾರ ಒಕ್ಕೂಟಕ್ಕೆ ಹಾಲಿ ಅಸ್ತಿತ್ವದಲ್ಲಿ ಇರುವ ಆಡಳಿತ ಮಂಡಳಿಯನ್ನೇ ಮುಂದುವರಿಸಲು ಸಹಕಾರ ಸಂಘಗಳ ಜಂಟಿ ನಿಬಂಧಕರು ಪ್ರಸ್ತಾವ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸುವ ಆಡಳಿತ ಮಂಡಳಿ ನಿರ್ದೇಶಕರು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆ ಆಗುವವರೆಗೆ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾಗಿ ಮುಂದುವರಿಯಲು ಸರ್ಕಾರ
ಸೂಚಿಸಿದೆ.

ಚಿಕ್ಕಬಳ್ಳಾಪುರ ಒಕ್ಕೂಟವು ಅಸ್ತಿತ್ವಕ್ಕೆ ಬಂದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆಯು ಪ್ರಾರಂಭವಾಗುವವರೆಗೆ ಮಾತ್ರ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಆಡಳಿತ ಮಂಡಳಿ ಸದಸ್ಯರು ಕೋಲಾರ ಒಕ್ಕೂಟದಲ್ಲಿ ಮುಂದುವರಿತಕ್ಕದ್ದು ನಂತರ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ನಿಯಮಾನುಸಾರ ನೇಮಕವಾಗತಕ್ಕದ್ದು ಎಂದು ಸರ್ಕಾರ ತಿಳಿಸಿದೆ.

ಆ.23ಕ್ಕೆ ವಿಚಾರಣೆ:ನಾವು ಐದು ವರ್ಷಕ್ಕೆ ಆಯ್ಕೆ ಆಗಿದ್ದೇವೆ. ಮೂರು ವರ್ಷಕ್ಕೆ ನಮ್ಮನ್ನು ತೆಗೆದರೆ ಹೇಗೆ? ಈ ವಿಚಾರವಾಗಿ ಹೈಕೋರ್ಟ್ ಮೊರೆ ಹೋಗಿದ್ದೇವೆ. ಒಂದು ವೇಳೆ ನಾವು ಹೈಕೋರ್ಟ್‌ಗೆ ಹೋಗದಿದ್ದರೆ ಚುನಾವಣೆ ನಡೆಯುತ್ತಿತ್ತು. ಆ.23ಕ್ಕೆ ವಿಚಾರಣೆಯು ನ್ಯಾಯಾಲಯದ ಮುಂದೆ ಬರಲಿದೆ ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದರು.

2024ರವರೆಗೆ ನಾವು ನಿರ್ದೇಶಕರಾಗಿ ಇರಲು ಅವಕಾಶ ನೀಡಿ ಇಲ್ಲವೆ 2024ರ ನಂತರ ವಿಭಜನೆ ಆಗಲಿ ಎಂದು ನಾವು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದೇವೆ ಎಂದರು.

ಸರ್ಕಾರದ ಪ್ರಕಾರ ಚಿಮುಲ್ ಆಡಳಿತ ಮಂಡಳಿಗೆ ಅಧ್ಯಕ್ಷರು ಬರುವವರೆಗೂ ಮಾತ್ರ ನಾವು ನಿರ್ದೇಶಕರಾಗಿ ಇರುತ್ತೇವೆ. ಚಿಮುಲ್ ಆಡಳಿತ ಮಂಡಳಿ ಅಧ್ಯಕ್ಷರ ಆಯ್ಕೆಯಾದ ತರುವಾಯ ನಮ್ಮ ನಿರ್ದೇಶಕ ಸ್ಥಾನಗಳು ಬರ್ಖಾಸ್ತಾಗುತ್ತವೆ. ಇದು ಯಾವ ನ್ಯಾಯ, ಕಾನೂನು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT