ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಆರಂಭಕ್ಕೆ ಮಿಶ್ರ ಪ್ರತಿಕ್ರಿಯೆ

ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶೈಕ್ಷಣಿಕ ವಲಯದಲ್ಲಿ ಸ್ವಾಗತ, ಕೆಲ ಪೋಷಕರಲ್ಲಿ ಆತಂಕ
Last Updated 24 ಅಕ್ಟೋಬರ್ 2020, 16:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ನವೆಂಬರ್ 17 ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದು, ಸರ್ಕಾರದ ಈ ನಿರ್ಧಾರವನ್ನು ಹಲವರು ಸ್ವಾಗತಿಸಿದರೆ, ಕೆಲವರು ಎಚ್ಚರಿಕೆಯ ಕಿವಿಮಾತು ಹೇಳುತ್ತಿದ್ದಾರೆ.

ಪ್ರತಿ ವರ್ಷವೂ ಜೂನ್‌ ಮೊದಲ ವಾರದಿಂದಲೇ ಕಾಲೇಜುಗಳು ಪುರಾರಂಭವಾಗುತ್ತಿದ್ದವು. ಈ ವರ್ಷ ಮಾರ್ಚ್‌ನಿಂದಲೇ ಕೊರೊನಾ ವೈರಸ್‌ ಹಾವಳಿ ಕಾಣಿಸಿಕೊಂಡ ಪರಿಣಾಮ ಶಾಲಾ, ಕಾಲೇಜುಗಳ ಆರಂಭಕ್ಕೆ ವಿಘ್ನ ಎದುರಾಗಿತ್ತು. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋದ ಕಾರಣ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈಗ ಉನ್ನತ ಶಿಕ್ಷಣ ಸಚಿವರು ನ.17ರಿಂದ ಪದವಿ ಕಾಲೇಜುಗಳ ಪುನರಾರಂಭಕ್ಕೆ ಸೂಚಿಸಿದ್ದಾರೆ.

ಕೋವಿಡ್‌ ಉಲ್ಭಣಿಸಿದ ಕಾರಣಕ್ಕೆ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಂದ ದೂರ ಉಳಿದು ಏಳು ತಿಂಗಳು ಗತಿಸಿದ ಈ ಹೊತ್ತಿನಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಜಿಲ್ಲೆಯಲ್ಲೂ ಅಧ್ಯಾಪಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಗಳು ಸ್ವಾಗತಿಸಿವೆ. ಆದರೆ, ಪೋಷಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಾಲೇಜು ಆಡಳಿತ ಮಂಡಳಿಯ ಪದಾಧಿಕಾರಿಗಳು ಸರ್ಕಾರದ ತೀರ್ಮಾನವು ಸೂಕ್ತವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಕಾಲೇಜುಗಳಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಬಡ ವಿದ್ಯಾರ್ಥಿಗಳು ಪ್ರತಿನಿತ್ಯ ಸ್ಯಾನಿಟೈಸರ್ ಬಳಸಿ, ಕಾಲೇಜಿಗೆ ಹೋಗಿ ಬರುವುದು ಕಷ್ಟಸಾಧ್ಯ. ಹೀಗಾಗಿ ಪಾಲಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕಾಲೇಜು ಆರಂಭಿಸಬೇಕು ಎನ್ನುವ ಒತ್ತಾಯ ವಿದ್ಯಾರ್ಥಿ ಸಂಘಟನೆ ನಾಯಕರದ್ದಾಗಿದೆ.

‘ಪದವಿ ಕಾಲೇಜುಗಳ ಪ್ರಾರಂಭಕ್ಕೆ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರವಾಗಿದೆ. ಕಾಲೇಜು ಆವರಣದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು
ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ’ ಎನ್ನುತ್ತಾರೆ ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್‌. ಶಿವರಾಮರೆಡ್ಡಿ.

‘ಇದೊಂದು ಒಳ್ಳೆಯ ನಿರ್ಧಾರ. ಕೋವಿಡ್‌ ಕಾರಣಕ್ಕೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಏಳು ತಿಂಗಳು ಕಳೆದಿವೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಷ್ಟು ದಿನ ಅಂತ ಹೀಗೆ ಇರಲು ಸಾಧ್ಯ? ಮುಖ್ಯವಾಹಿನಿಗೆ ಪುನಃ ಮರಳಲು ಇದೊಂದು ಉತ್ತಮ ಅವಕಾಶ. ಆದರೆ, ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಮಾಸ್ಕ್‌ ಬಳಕೆ, ಅಂತರ ಕಾಯ್ದುಕೊಳ್ಳುವುದು, ಶುಚಿತ್ವಕ್ಕೆ ಒತ್ತು ನೀಡುವ ಕೆಲಸಗಳಾಗಬೇಕು’ ಎಂದು ಎಸ್‌ಜೆಸಿಐಟಿ ಪ್ರಾಂಶುಪಾಲ ಕೆ.ಎಂ.ರವಿಕುಮಾರ್.

‘ಆನ್‌ಲೈನ್‌ ಬೋಧನೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿಷಯ ಮನದಟ್ಟು ಆಗುತ್ತಿಲ್ಲ. ಎಲ್ಲರಿಗೂ ಆನ್‌ಲೈನ್‌ನಲ್ಲಿ ಬರಲು ಸಾಧ್ಯವಾಗುತ್ತಿಲ್ಲ. ಬಹುತೇಕ ವಿದ್ಯಾರ್ಥಿಗಳ ಅನಾನುಕೂಲ ತಪ್ಪಿಸಲು ತರಗತಿ ಆರಂಭಿಸುವುದು ಸ್ವಾಗತಾರ್ಹ. ನೇರ ಪಾಠ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಿಧಾನ. ಪಾಠದ ಗೊಂದಲಗಳನ್ನು ಅಧ್ಯಾಪಕರ ಜತೆ ಚರ್ಚಿಸಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಸುಬ್ಬರಾಯನ ಪೇಟೆ ನಿವಾಸಿ ಸುನಿತಾ.

‘ಪದವಿ ಕಾಲೇಜುಗಳ ಪ್ರಾರಂಭಿಸುವ ನಿರ್ಧಾರ ಸ್ವಾಗತಾರ್ಹ, ಖಾಸಗಿ ಕಾಲೇಜುಗಳಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಂಡು ಪಾಠ ಕೇಳಲು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಇರುತ್ತದೆ. ಆದರೆ ಸರ್ಕಾರಿ ಕಾಲೇಜಿನಲ್ಲಿ ಮೊದಲೇ ಸ್ಥಳದ ಅಭಾವ ಕೊಠಡಿಗಳ ಕೊರತೆ ಇರುವುದರಿಂದ ಅಂತರ ಕಾಯ್ದುಕೊಳ್ಳಲು ತೊಂದರೆಯಾಗಬಹುದು’ ಎನ್ನುವ ಆತಂಕ ಕೆಲ ಪೋಷಕರದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT