ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ ಶಾಸಕ ಸುಬ್ಬಾರೆಡ್ಡಿ ಕೆಂಡಾಮಂಡಲ

ಕೆಡಿಪಿ ಸಭೆ: ಅಗತ್ಯವಿರುವವರಿಗೆ ಸೌಲಭ್ಯ ಕಲ್ಪಿಸಲು ಶಾಸಕ ಸುಬ್ಬಾರೆಡ್ಡಿ ಸಲಹೆ
Last Updated 29 ಸೆಪ್ಟೆಂಬರ್ 2022, 4:52 IST
ಅಕ್ಷರ ಗಾತ್ರ

ಗುಡಿಬಂಡೆ: ‘ತಾಲ್ಲೂಕಿನ ನಿವೇಶನ ರಹಿತರಿಗೆ ನಿವೇಶನ ಹಾಗೂ ಸಾರಿಗೆ ರಹಿತ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಿಫಲನಾದರೆ, ಮತ್ತೆ ರಾಜಕೀಯ ಜೀವನದಿಂದ ಹಿಂದೆ ಸರಿಯುತ್ತೇನೆ’ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಇಲಾಖಾವಾರು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅವರು ಕೆಂಡಮಂಡಲವಾದ ರೀತಿಯಿದು.

1800 ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು 2 ಹಂತಗಳಲ್ಲಿ 75 ಎಕರೆ ಜಮೀನಿಗೆ ಮಂಜೂರಾತಿ ನೀಡಲಾಗಿದ್ದು,ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ನೀಡಲು 9 ವರ್ಷಗಳಿಂದ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಅಧಿಕಾರಿಗಳು ಕುಂಟುನೆಪ ಹೇಳಿಕೊಂಡು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ 15 ದಿನಗಳ ಒಳಗೆ ಹಕ್ಕುಪತ್ರ ವಿತರಿಸಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಇಒ ರವೀಂದ್ರ ಅವರಿಗೆ ಎಚ್ಚರಿಕೆ ನೀಡಿದರು.

ನೆರೇಗಾ ಯೋಜನೆಯಲ್ಲಿ ಗುಡಿಬಂಡೆ ತಾಲ್ಲೂಕಿಗೆ 5 ಲಕ್ಷ ಮಾನವ ದಿನಗಳ ಬಳಕೆಗೆ ಸರ್ಕಾರ ಗುರಿ ನಿಗದಿ ಮಾಡಿದೆ. ಆದರೆ, 6 ತಿಂಗಳಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು 1 ಲಕ್ಷ ಮಾನವ ದಿನಗಳ ಜನರಿಗೆ ಕೆಲಸ ನೀಡಿದ್ದಾರೆ. ಉಳಿದ 4 ಲಕ್ಷ ಮಾನವ ದಿನಗಳನ್ನು ಯಾವ ರೀತಿ ಮಾಡುತ್ತೀರಿ ಎಂದು ಪಿಡಿಒಗಳಿಗೆ ಪ್ರಶ್ನಿಸಿದರು. ಅಲ್ಲದೆ, ರಸ್ತೆ ಅಗಲೀಕರಣದಿಂದ ಮನೆ ಕಳೆದುಕೊಂಡವರಿಗೆ ಈವರೆಗೆ ನಿವೇಶನ ಕಲ್ಪಿಸದ ಬಗ್ಗೆಯೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಳೆಹಾನಿಯಿಂದ ತೋಟಗಾರಿಕೆ, ಕೃಷಿ, ಮನೆಗಳು, ಶಾಲೆಗಳು ಹಾನಿಯಾಗಿದ್ದು, ಜಂಟಿ ಸಮಿತಿಯಿಂದ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಮೂಲಕ ಫಲಾನುಭವಿಗಳಿಗೆ ಪರಿಹಾರ ಬರಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸಲಹೆ ನೀಡಿದರು.

ಸಭೆಯಲ್ಲಿ ಸಾಮಾಜಿಕ, ವಲಯ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪಶು ಇಲಾಖೆ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ ಸಣ್ಣ ನೀರಾವರಿ ಇಲಾಖೆ, ರೇಷ್ಮೆ ಇಲಾಖೆ, ವಿಷಯಗಳು ಚರ್ಚಿಸಲಾಯಿತ್ತು.

ಸಭೆಯಲ್ಲಿ ತಹಶೀಲ್ದಾರ್ ಸಿಗ್ಬತುಲ್ಲಾ, ಇಒ ರವೀಂದ್ರ, ಬಿಇಒ ಮುನೇಗೌಡ, ಎಡಿಎ ಅಮರನಾರಾಯಣರೆಡ್ಡಿ, ಎಡಿಎಚ್. ಕೃಷ್ಣಮೂರ್ತಿ, ಎಇಇ ರಘುನಾಥಮೂರ್ತಿ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ನವೀನ, ಮುಖ್ಯಾಧಿಕಾರಿ ರಾಜಶೇಖರ್, ಸಿಡಿಪಿಒ ರಪೀಕ್, ಸಮಾಜ ಕಲ್ಯಾಣ ಇಲಾಖೆ ಎಡಿಎ ಕೆ.ರವಿ, ಬಿಸಿಎಂ ಅಧಿಕಾರಿ ರಾಮಯ್ಯ, ಅರ್.ಎಫ್.ಓ ಚಂದ್ರಶೇಖರರೆಡ್ಡಿ, ಕೆಡಿಪಿ ನಾಮಿನಿ ಸದಸ್ಯರಾದ ಹನುಮಂತರೆಡ್ಡಿ, ನರಸಿಂಹಮೂರ್ತಿ, ಮಂಜುನಾಥ, ಜಯಮ್ಮ, ಪಿಡಿಒ ನಾಗರಾಜ್, ರಾಮಾಂಜಿ, ಶ್ರೀನಿವಾಸ್, ಮಂಜುನಾಥ ಇದ್ದರು.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ

ವೈದ್ಯರ ನಿರ್ಲಕ್ಷ್ಯತೆಯಿಂದ ಪಟ್ಟಣದ ತಾಲ್ಲೂಕು ಅಸ್ಪತ್ರೆಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂದು ಶಾಸಕ ಸುಬ್ಬಾರೆಡ್ಡಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಜತೆಗೆ ಪಕ್ಕದ ರಾಜ್ಯದಿಂದ ಅಧಿಕ ಸಂಖ್ಯೆ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಅವರಿಂದ ಮಧ್ಯವರ್ತಿಗಳ ಮೂಲಕ ಹಣ ಪೀಕುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ.ಈ ಎಲ್ಲ ಅಕ್ರಮ ಚಟುವಟಿಕೆಗಳು ನಿಲ್ಲಬೇಕು. ಎಲ್ಲರಿಗೂ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ಟಿಎಚ್ಒ ಡಾ.ನರಸಿಂಹಮೂರ್ತಿ ಅವರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT