ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಅನುದಾನ ಸದ್ಬಳಕೆಗೆ ಶಾಸಕರ ತಾಕೀತು

ತಾಲ್ಲೂಕುಮಟ್ಟದ ಪ್ರಗತಿ ಪರಿಶೀಲನ ಸಭೆ; ಜಿ.ಪಂ, ತಾಪಂ ಸದಸ್ಯರ ಕೊನೆ ಸಭೆ
Last Updated 5 ಮಾರ್ಚ್ 2021, 3:04 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಅಧಿಕಾರಿಗಳು ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ‌ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ‌ಲಾಭ ದೊರೆಯುವಂತೆ ಸೂಕ್ತ ಕ್ರಮ ವಹಿಸಬೇಕು’ ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಆರ್. ಲೋಕೇಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

‘ಫೆಬ್ರುವರಿ ಮುಗಿದು ಮಾರ್ಚ್ ಆರಂಭವಾಗಿದ್ದು, ಪ್ರತಿ ಇಲಾಖೆಯಲ್ಲಿ ಯಾವುದೇ ಅನುದಾನ ವಾಪಸ್ಸು ಹೋಗದಂತೆ ಅಧಿಕಾರಿಗಳು ಜಾಗೃತಿ ವಹಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆತು ಸದ್ಬಳಕೆಯಾಗುವಂತೆ ನಿಗಾ ವಹಿಸಬೇಕು. ಬಿಡುಗಡೆಯಾಗಿರುವ ಅನುದಾನ ವಾಪಾಸ್‌ ಆದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು‌. ವಿವಿಧ ಇಲಾಖೆಗಳಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದರು.

‘ಮುಂದಿನ ವಾರದೊಳಗೆ ದಿನಾಂಕ ನಿಗದಿಪಡಿಸಿ, ಬಾಕಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಕೋವಿಡ್‌ ಲಸಿಕೆ ಉಚಿತವಾಗಿ ನೀಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ವ್ಯಾಪಕ ಪ್ರಚಾರ ನಡೆಸಬೇಕು. ಈ ಅವಧಿಯಲ್ಲಿ ‌ಚುನಾಯಿತವಾಗಿರುವ ತಾ.ಪಂ ಹಾಗೂ ಜಿ.ಪಂ ಸದಸ್ಯರ ಕೊನೆಯ ಸಭೆ ಇದಾಗಿದ್ದು, 5 ವರ್ಷಗಳಿಂದ ತಾವು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅಭಿವೃದ್ಧಿಗೆ ಸಹಕಾರಿಯಾಗಿದ್ದೀರಿ. ಜನತೆ ನೀಡಿರುವ ಅವಕಾಶವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಯನ್ನು
ಪೂರೈಸಿದ್ದಕ್ಕೆ ಅಭಿನಂದನೆ’ ಎಂದರು.

ತಾ.ಪಂ.ಅಧ್ಯಕ್ಷ ಆರ್.ಲೋಕೇಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಮತ್ತು ಯೋಜನೆಗಳ ಬಗ್ಗೆ ಮೊದಲು ತಾ.ಪಂ.ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಅರಿವನ್ನು ಮೂಡಿಸಬೇಕು’ ಎಂದು‌ ಹೇಳಿದರು.

ತಾ.ಪಂ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ‘ನಗರದ ಹೆರಿಗೆ ಆಸ್ಪತ್ರೆಯಲ್ಲಿ ಎಕ್ಸ್ ರೇ ಸೌಲಭ್ಯವಿಲ್ಲದ ಕಾರಣ ಗರ್ಭಿಣಿ ಸ್ತ್ರೀಯರು ಪರೀಕ್ಷೆಗೆ ಖಾಸಗಿಯವರ ಬಳಿಗೆ ಹೋಗಬೇಕಾಗಿದೆ. ಕನಿಷ್ಠ 800 ಪಾವತಿಸಬೇಕಾಗುತ್ತದೆ. ಅಲ್ಲದೆ ಆಸ್ಪತ್ರೆಯಲ್ಲಿ ಬಿಸಿ ನೀರಿನ ಸೌಲಭ್ಯವಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ಶುದ್ಧ ನೀರಿನ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ’ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಮಾತನಾಡಿ, ‘ಸಾಮಾನ್ಯ ವರ್ಗದವರಿಗೆ ತಾಲೂಕಿನಲ್ಲಿ 5,000 ಟಾರ್ಪಲ್‌ ವಿತರಿಸಿರುವ ಗುರಿ ಹೊಂದಲಾಗಿದ್ದು, ಪ್ರತಿ ಟಾರ್ಪಲ್‌ಗೆ ₹975 ನಿಗದಿಪಡಿಸಲಾಗಿದೆ’
ಎಂದರು.

ತಾಲ್ಲೂಕಿನಲ್ಲಿ ಮುಸುಕಿನಜೋಳ ಹೆಚ್ಚಾಗಿ ಬೆಳೆಯುವುದರಿಂದ ಮುಂದಿನ ಬಾರಿ ಮುಸುಕಿನ ಜೋಳ ಬಿತ್ತನೆ ಖರೀದಿ ಕೇಂದ್ರ ಪ್ರಾರಂಭಿಸಲು ಶಿಫಾರಸು ಮಾಡಬೇಕು ಎಂದು ಸದಸ್ಯರಾದ ನಾಗೇಶ್, ನಾರಪ್ಪ ರೆಡ್ಡಿ ಮನವಿ ಮಾಡಿದರು.

ತಾ.ಪಂ ಇಓ ಎನ್.ಮುನಿರಾಜು, ತಾ.ಪಂ. ಉಪಾಧ್ಯಕ್ಷೆ ರತ್ನಮ್ಮ, ನರೇಗಾ ಸಹಾಯಕ‌ ನಿರ್ದೇಶಕ ಪಿ.ಚಿನ್ನಪ್ಪ, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಾ.ಪಂ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT