ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಬಟ್ಲಹಳ್ಳಿಯ ಮಾದರಿ ಸರ್ಕಾರಿ ಶಾಲೆ

Last Updated 30 ನವೆಂಬರ್ 2020, 2:15 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಬಟ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲ ಸೌಲಭ್ಯ ಒಳಗೊಂಡಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಮಾದರಿಯಾಗಿದೆ.

1ರಿಂದ 7ನೇ ತಗತಿಯವರೆಗೆ 131 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಗೆ ಆಕರ್ಷಕವಾಗಿ ಬಣ್ಣ ಬಳಿಸಲಾಗಿದೆ. ಆವರಣದಲ್ಲಿ ಕಿಚನ್ ಗಾರ್ಡನ್, ಉದ್ಯಾನ ನಿರ್ಮಿಸಿ ಸ್ವಚ್ಛತೆ ಕಾಪಾಡಲಾಗಿದೆ.

ಕೈತೋಟದಲ್ಲಿ ಬಣ್ಣ ಬಣ್ಣದ ಫಲಕಗಳನ್ನು ಅಳವಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಂದು ಮಾದರಿ ಶಾಲೆ ಮಾಡಬೇಕು ಎಂಬುದು ಹಿಂದಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೌಜಿಯಾ ತರನ್ನುಮ್ ಅವರ ಆಶಯವಾಗಿತ್ತು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಯ ಸಹಯೋಗದಲ್ಲಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಆಯ್ಕೆ ಮಾಡಲಾಗಿದೆ.

ನರೇಗಾದಡಿ ಮೂಲಸೌಲಭ್ಯ ಕೈಗೊಳ್ಳಲಾಗಿದೆ. ಶಾಲಾ ಕೊಠಡಿಗಳಿಗೆ ಸುಣ್ಣ, ಬಣ್ಣ, ಗೋಡೆಬರಹ, ಪೀಠೋಪಕರಣ, ಪಾಠೋಪಕರಣಗಳು, ಬಿಸಿಯೂಟಕ್ಕೆ ಬೇಕಾದ ಉಪಕರಣಗಳು, ನೀರಿನ ಟ್ಯಾಂಕ್ ನಿರ್ಮಾಣಕ್ಕೆ ದಾನಿಗಳಿಂದ ದೇಣಿಗೆ ಸಂಗ್ರಹಿಸುವಂತೆ ಪೌಜಿಯಾ ತರನ್ನುಮ್ ಸೂಚನೆ ನೀಡಿದ್ದರು. ಶಾಲೆಯ ಬಡ್ತಿ ಶಿಕ್ಷಕ ಸಾದಲಿ ಶ್ರೀನಿವಾಸ್ ಮತ್ತು ಶಿಕ್ಷಕರು ಎಸ್.ಡಿ.ಎಂ.ಸಿ ಸಭೆಯಲ್ಲಿ ತೀರ್ಮಾನ ಕೈಗೊಂಡು ವಿವಿಧ ಕಾಮಗಾರಿ ಮಾಡಿಸಿದ್ದಾರೆ.

ಬಟ್ಲಹಳ್ಳಿ ಬೆಸ್ಕಾಂ ಶಾಖೆಯ ಅಧಿಕಾರಿ ಗೋಪಾಲಕೃಷ್ಣ ಶಾಲೆಯ 12 ಕೊಠಡಿಗಳಿಗೆ ಸುಣ್ಣ, ಬಣ್ಣ, ಕಿಟಕಿ, ಬಾಗಿಲುಗಳಿಗೆ ಬಣ್ಣ ಮಾಡಿಸಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡುವಿನಿಂದ ಚಿತ್ರಕಲೆಗಾರರನ್ನು ಕರೆಸಿ ಹೊರ ಗೋಡೆಗಳಿಗೆ ಆಕರ್ಷಣೀಯವಾಗಿ ಕಾಣುವಂತೆ ವಿಶಿಷ್ಟ ರೀತಿಯ ಚಿತ್ರಕಲೆ ಮಾಡಿಸಿದ್ದಾರೆ. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎನ್. ರಘುನಾಥರೆಡ್ಡಿ ₹ 30 ಸಾವಿರ ವೆಚ್ಚದ ಮೈಕ್ ಸೆಟ್ ನೀಡಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ನೆಲಕ್ಕೆ ಪ್ಲೋರಿಂಗ್ ಮ್ಯಾಟ್, ಸಹಾಯಕ ನಿರ್ದೇಶಕಿ ಕವಿತಾ, ಹಳೆಯ ವಿದ್ಯಾರ್ಥಿಗಳಾದ ರಾಮಲಿಂಗಾರೆಡ್ಡಿ, ಬೈರಾರೆಡ್ಡಿ, ಪದ್ಮಾ ಮತ್ತಿತರರು ವಿವಿಧ ವಸ್ತುಗಳನ್ನು ದಾನ ಮಾಡಿದ್ದಾರೆ.

ಹಳೆಯ ವಿದ್ಯಾರ್ಥಿ ಕಲ್ಯಾಣರೆಡ್ಡಿ ₹ 1.5 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಶಿಕ್ಷಕರು ₹ 30 ಸಾವಿರ ವೆಚ್ಚದಲ್ಲಿ ಶಾಲೆಯ ಕಾಂಪೌಂಡ್‌ಗೆ ಚಿತ್ರಗಳನ್ನು ಬರೆಸಿದ್ದಾರೆ. ನೆದರ್ಲೆಂಡ್‌ನ ರಾಬರ್ಟ್ ರೋಜ್ ₹ 1 ಲಕ್ಷ ಮೌಲ್ಯದ ಕ್ರೀಡಾ ಉಪಕರಣ ನೀಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಧ್ವಜಸ್ಥಂಭವನ್ನು ನಿರ್ಮಾಣ ಮಾಡಿಸಿದ್ದಾರೆ ಎಂದು ಮುಖ್ಯಶಿಕ್ಷಕ ಶ್ರೀನಿವಾಸ್ ಮಾಹಿತಿ ನೀಡಿದರು.

ನರೇಗಾ ಯೋಜನೆಯಡಿ ಕಾಂಪೌಂಡ್, ಆಟದ ಮೈದಾನ ಸಮತಟ್ಟು ಕಾಮಗಾರಿ, ಕಬಡ್ಡಿ, ಕೊಕ್ಕೊ, ಬಾಲ್ ಬ್ಯಾಡ್‌ಮಿಂಟನ್, ಬ್ಯಾಸ್ಕೆಟ್ ಬಾಲ್, ವಾಲಿಬಾಲ್ ಕ್ರೀಡಾಂಗಣಗಳ ನಿರ್ಮಾಣ, ಮಳೆನೀರು ಸಂಗ್ರಹ, ಕಿಚನ್ ಗಾರ್ಡನ್, ಸಿಸಿ ರಸ್ತೆ, ಪ್ರವೇಶದ್ವಾರ, ಉದ್ಯಾನ ನಿರ್ಮಿಸಲಾಗಿದೆ.

ಮಕ್ಕಳ ದಾಖಲಾತಿ ಹೆಚ್ಚಳ

2018-19‌ರಲ್ಲಿ 61 ಮತ್ತು 2019-20ರಲ್ಲಿ 104 ವಿದ್ಯಾರ್ಥಿಗಳಿದ್ದರು. 2020-21ರಲ್ಲಿ 131 ಮಕ್ಕಳಿದ್ದಾರೆ. 1 ಮತ್ತು 2 ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಳಿಮುಖವಾಗುತ್ತಿದ್ದರೆ ಈ ಶಾಲೆಯಲ್ಲಿ ಏರುಗತಿಯಲ್ಲಿ ಸಾಗುತ್ತಿದೆ.

ಶಾಲೆಯಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಭಾಷಾ ವಿಷಯಗಳ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಎಲ್ಲ ಸೌಲಭ್ಯಗಳಿದ್ದರೂ ಶಿಕ್ಷಕರ ಕೊರತೆಯಿದೆ. ಕೇವಲ 4 ಜನ ಶಿಕ್ಷಕರಿದ್ದಾರೆ. ಇನ್ನು ಮೂವರು ಶಿಕ್ಷಕರ ಅವಶ್ಯಕತೆ ಇದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಮೀನಾಮೇಷ ಎಣಿಸದೆ ಕೂಡಲೇ ಅವಶ್ಯ ಶಿಕ್ಷಕರನ್ನು ನೇಮಿಸಬೇಕು ಎಂಬುದು ಪೋಷಕರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT