ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕ ಸ್ಥಾನ ಕಳೆದುಕೊಂಡ ಮೋಹನ್ ರೆಡ್ಡಿ

ಹಿರೇನಾಗವಲ್ಲಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಒಂಬತ್ತು ನಿರ್ದೇಶಕರ ಸಾಮೂಹಿಕ ರಾಜೀನಾಮೆ
Last Updated 24 ಜನವರಿ 2020, 15:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಹಿರೇನಾಗವಲ್ಲಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ 11 ನಿರ್ದೇಶಕರ ಪೈಕಿ ಒಂಬತ್ತು ನಿರ್ದೇಶಕರು ಸಾಮೂಹಿಕ ರಾಜೀನಾಮೆ ನೀಡಿದ ಕಾರಣ ಕೋರಂ ಕೊರತೆಯಿಂದ ಸಂಘ ಸೂಪರ್‌ ಸೀಡ್‌ಗೆ ಒಳಗಾಗುವ ಜತೆಗೆ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ನಿರ್ದೇಶಕ ಮೋಹನ್ ರೆಡ್ಡಿ ಅವರು ನಿರ್ದೇಶಕ ಸ್ಥಾನ ಕಳೆದುಕೊಳ್ಳುವಂತಾಗಿದೆ.

ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರವಿ ಅವರು ಸದ್ಯ ಹಿರೇನಾಗವಲ್ಲಿಯ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಡಿಸಿಸಿ ಬ್ಯಾಂಕಿನ ಚಿಕ್ಕಬಳ್ಳಾಪುರ ಶಾಖೆಯ ವ್ಯವಸ್ಥಾಪಕರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡುವ ಜತೆಗೆ ಮೋಹನ್ ರೆಡ್ಡಿ ಅವರಿಗೆ ‘ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರ ಕಲಂ 18-ಬಿ(i)ರ ಅಡಿ ನಿರ್ದೇಶಕತ್ವ ಸಮಾಪ್ತಿಯಾಗಿದೆ’ ಎಂದು ಪತ್ರ ಬರೆದಿದ್ದಾರೆ.

ಹಿರೇನಾಗವಲ್ಲಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದ ಮೋಹನ್ ರೆಡ್ಡಿ ಅವರು ಶಾಸಕ ಡಾ.ಕೆ.ಸುಧಾಕರ್ ಅವರ ಕಟ್ಟಾ ಬೆಂಬಲಿಗನಾಗಿ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 2018ರ ನವೆಂಬರ್ 18 ರಂದು ಡಿಸಿಸಿ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಧಾಕರ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಉಪ ಚುನಾವಣೆ ಎದುರಿಸುವ ವೇಳೆ ಮೋಹನ್‌ ರೆಡ್ಡಿ ಅವರು ಕಾಂಗ್ರೆಸ್‌ನಲ್ಲಿಯೇ ಉಳಿದು, ಸುಧಾಕರ್ ಅವರ ವಿರುದ್ಧ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಂದಿ ಆಂಜನಪ್ಪ ಅವರ ಪ್ರಚಾರ ನಡೆಸಿದ್ದರು. ಇದೇ ಅವರಿಗೆ ಮುಳುವಾಯಿತು ಎನ್ನುತ್ತವೆ ಸದ್ಯದ ವಿದ್ಯಮಾನ ಕುರಿತ ವಿಶ್ಲೇಷಣೆಗಳು.

ಈ ಕುರಿತು ಮೋಹನ್‌ ರೆಡ್ಡಿ ಅವರನ್ನು ವಿಚಾರಿಸಿದರೆ, ‘ನನ್ನ ನಿರ್ದೇಶಕ ಸ್ಥಾನ ಸಮಾಪ್ತಿಯಾಗಿರುವ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT