ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂತ್ವನ ಕೇಂದ್ರದಲ್ಲಿ ತಾಯಿ, ಆಸ್ಪತ್ರೆಯಲ್ಲಿ ಮಗು!

ಕರಗದ ಕಲ್ಲುಹೃದಯಗಳು
Last Updated 14 ಜನವರಿ 2021, 2:19 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಹೆತ್ತವರಿಗೆ ಬೇಡವಾಗಿ ದಾರಿಯಲ್ಲಿ ಹೊರಟಿದ್ದ ಅಪರಿಚಿತ ಅಜ್ಜಿಯ ಮಡಿಲು ಸೇರಿದ್ದ ತಾಲ್ಲೂಕಿನ ಊಟಗೊಂದಿ ತಾಂಡದ ದಂಪತಿಯ ನವಜಾತ ಹೆಣ್ಣು ಶಿಶು ಈಗ ಯಾರೂ ಇಲ್ಲದೆ ಅಕ್ಷರಶಃ ಅನಾಥವಾಗಿದೆ. ಮೂರ‍್ನಾಲ್ಕು ದಿನಗಳಿಂದ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಪೋಷಣೆ ಪಡೆಯುತ್ತಿದೆ.

ಸಾಂತ್ವನ ಕೇಂದ್ರ ತಲುಪಿದ ಹೆತ್ತಮ್ಮ, ಮುಖ ನೋಡಲು ಇಷ್ಟಪಡದ ತಂದೆ. ಅಪ್ಪ-ಅಮ್ಮ ಇದ್ದರೂ ಅನಾಥವಾಗಿ ಆಸ್ಪತ್ರೆಯಲ್ಲಿರುವ ಮಗು. ಮಗುವನ್ನು ಹೆತ್ತವರ ಮಡಿಲು ಸೇರಿಸಲು ಪ್ರಯತ್ನ ಪಡುತ್ತಿರುವ ಅಧಿಕಾರಿಗಳು. ಮಗು ಕಣ್ಣ ಮುಂದಿದ್ದರೂ ಕರಗದ ಹೆತ್ತವರ ಕಲ್ಲುಮನಸ್ಸು.

ಚಿಕ್ಕಬಳ್ಳಾಪುರದ ಜಿಲ್ಲಾ ಮಟ್ಟದಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಅಧಿಕಾರಿಗಳ ತಂಡವು ಹೆಣ್ಣು ಮಗುವಿನ ಪೋಷಕರಿಗೆ ಕೌನ್ಸೆಲಿಂಗ್‌ ಮಾಡುತ್ತಿದೆ. ಕಾನೂನುಬದ್ಧವಾಗಿ ಮಗುವಿನ ಪೋಷಣೆ ಹೊಣೆಯಿಂದ ಪೋಷಕರು ಪಲಾಯನ ಮಾಡುವಂತಿಲ್ಲ. ಮಗುವನ್ನು ಪೋಷಕರೇ ಸಾಕಬೇಕು ಎಂದು ಬುದ್ಧಿಮಾತು ಹೇಳಿದ್ದಾರೆ.

ಆದರೆ, ‘ಹೆಣ್ಣು ಮಗು ತಮಗೇ ಬೇಡವೇ ಬೇಡ’ ಎಂದು ಪೋಷಕರು ಹಠ ಹಿಡಿದ್ದಾರೆ. ಪೋಷಕರ ಮನವೊಲಿಕೆಗೆ ಅಧಿಕಾರಿಗಳು ಮತ್ತಷ್ಟು ಕಾಲಾವಕಾಶ ಪಡೆದಿದ್ದಾರೆ. ಇಷ್ಟೆಲ್ಲಾ ಬುದ್ಧಿಮಾತು ಹೇಳಿದರೂ ಪೋಷಕರು ಆಸ್ಪತ್ರೆಯಲ್ಲಿರುವ ಮಗುವಿನ ಮುಖವನ್ನು ನೋಡದೇ ಮರಳಿದ್ದಾರೆ.

‘ಚಿಕ್ಕಬಳ್ಳಾಪುರದ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿದ್ದಅಶೋಕ್ ನಾಯಕ್ ಮತ್ತು ಅಸ್ವಿನಿಬಾಯಿ ದಂಪತಿ ಹೆಣ್ಣುಮಗು ತಮಗೆ ಬೇಡವೇ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಅನೇಕ ಬಾರಿ ಅವರಿಗೆ ಕೌನ್ಸೆಲಿಂಗ್‌ ಮಾಡಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಪೋಷಕರನ್ನು ಮತ್ತೊಮ್ಮೆ ಕೌನ್ಸೆಲಿಂಗ್‌ ಮಾಡಿ ಮನವೊಲಿಸಲಾಗುವುದು’ ಎಂದು ತಾಲ್ಲೂಕು ಶಿಶು ಕಲ್ಯಾಣಾಧಿಕಾರಿ ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.

‘ಗಂಡಾಗಲಿ, ಹೆಣ್ಣು ಮಗು ಆಗಲಿ ಜನಿಸುವ ಹಾಗೂ ಬದುಕುವ ಹಕ್ಕು ಇರುತ್ತದೆ. ಹೆಣ್ಣು ಬೇಡ ಎಂದು ಹೇಳುವ ಹಕ್ಕು ಪೋಷಕರಿಗೆ ಇಲ್ಲ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹೆಣ್ಣು ಮಗು ಬೇಡ ಎಂದು ಹೇಳುವ ಪೋಷಕರಿಗೆ ಮೊದಲು ಕೌನ್ಸೆಲಿಂಗ್ ಮಾಡಬೇಕಾಗಿದೆ. ನಂತರ ಮಗುವಿನ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಪೋಷಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ಜಿ.ಸುಧಾಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT