7
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮ

ಬಳಸಿದಷ್ಟು ಮಾತೃಭಾಷೆ ಸಂಪದ್ಭರಿತ

Published:
Updated:
ಕಾರ್ಯಕ್ರಮದಲ್ಲಿ ಚಿತ್ತಾರದ ವೆಂಕಟರಾಯಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.

ಚಿಕ್ಕಬಳ್ಳಾಪುರ: ‘ನಮ್ಮ ಮಾತೃಭಾಷೆಯನ್ನು ನಾವು ಹೆಚ್ಚು ಹೆಚ್ಚು ಬಳಸಿದಷ್ಟು ಸಂಪತ್ಭರಿತವಾಗುತ್ತದೆ. ಮಾತೃಭಾಷೆಯನ್ನು ಬಳಸುವ ಜತೆಗೆ ನಮ್ಮ ಸುತ್ತಲಿನ ಪರಿಸರವನ್ನು, ಸಾಂಸ್ಕೃತಿಕ ಸಿರಿ, ಚಾರಿತ್ರಿಕ ಹಿನ್ನೆಲೆಯನ್ನು ನಾವು ಅರ್ಥೈಸಿಕೊಂಡು ಅದರೊಂದಿಗೆ ಸಮನ್ವಯ ಮಾಡಿಕೊಂಡಾಗ ವ್ಯಕ್ತಿತ್ವ ವಿಕಸನಕ್ಕೆ ಮತ್ತಷ್ಟು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ’ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಗರದ 28ನೇ ವಾರ್ಡ್‌ ನಿವಾಸಿ ಚಿತ್ತಾರದ ಸಿ.ವೆಂಕಟರಾಯಪ್ಪನವರ ಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ‘ವಿದ್ಯಾರ್ಥಿಗಳು ಮಾತೃಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಮೂಲಕ ಒಳಗಿನ ಸೃಜನಶೀಲತೆಯನ್ನು ಹೊರಹಾಕುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಅದು ಯಶಸ್ಸನ್ನು ಎತ್ತರಕ್ಕೆ ಒಯ್ಯಲು ಪೂರಕವಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಹೇರಳ ಪ್ರಾಕೃತಿಕ ಸಂಪತ್ತು ಮತ್ತು ಪುರಾತನ ಕಾಲ ಸ್ಮಾರಕಗಳು, ದೇವಾಲಯಗಳಿರುವುದು ನಮಗೆ ಹೆಮ್ಮೆಯ ವಿಚಾರವಾಗಬೇಕು. ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ಗಡಿ ಭಾಗದ ಜಿಲ್ಲೆಯಲ್ಲಿ ಮಾತೃಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಒತ್ತು ಕೊಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಕಸಾಪ ಅನ್ಯಭಾಷಿಕರನ್ನು ಓಲೈಸಿಕೊಂಡು ಅವರ ನಡುವೆಯೇ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ’ ಎಂದು ತಿಳಿಸಿದರು.

ವನಜಮ್ಮ ಮತ್ತು ಚಿತ್ತಾರದ ವೆಂಕಟರಾಯಪ್ಪ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಉಷಾ ಶ್ರೀನಿವಾಸ್, ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಪ್ರವೀಣ್, ಶಂಷುದ್ದೀನ್, ನಿರ್ಮಲಾ ಮೇರಿ, ರಾಮಕೃಷ್ಣಪ್ಪ, ನಾಗರಾಜ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !