ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಂಬಿಗೆ ಪ್ರಚೋದನೆ: ವರದಿಗಾರನ ಬಂಧನ

ಯಗವಮದ್ದಲಖಾನೆಯಲ್ಲಿ ಕೊಲೆ ಆರೋಪಿ ಮನೆಗೆ ಬೆಂಕಿ ಹಚ್ಚಲು ಪ್ರಚೋದಿಸಿದ ಆರೋಪ
Last Updated 28 ಜುಲೈ 2020, 15:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಯಗವಮದ್ದಲಖಾನೆಯಲ್ಲಿ ಕೊಲೆ ಆರೋಪಿ ವೆಂಕಟೇಶ್ ಅವರ ಮನೆ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಲು ಪ್ರಚೋದಿಸಿದ ಆರೋಪದ ಮೇಲೆ ಯೂಟ್ಯೂಬ್ ಚಾನಲ್ ವರದಿಗಾರನೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಾಗೇಪಲ್ಲಿ ನಿವಾಸಿ, ಟಿ.ವಿ 4 ಚಾನೆಲ್ ವರದಿಗಾರನೆಂದು ಹೇಳಿಕೊಳ್ಳುತ್ತಿದ್ದ ನರೇಂದ್ರ ಅವರು ಬಂಧಿತ ಆರೋಪಿ. ಅವರ ವಿರುದ್ಧ ಪೊಲೀಸರು ಐಪಿಸಿಯ 143 (ಗುಂಪು ಕೂಡುವುದು) 147 (ದೊಂಬಿ), 148 (ಶಸ್ತ್ರಾಸ್ತ್ರ ಬಳಸಿ ದಂಗೆ), 332 (ಸರ್ಕಾರಿ ನೌಕರನ ಮೇಲೆ ಹಲ್ಲೆ), 353 (ಕರ್ತವ್ಯಕ್ಕೆ ಅಡ್ಡಿ) ಮತ್ತು 436 (ಬೆಂಕಿ ಹಚ್ಚುವುದು) ಆರೋಪಗಳ ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಯಗವಮದ್ದಲಖಾನೆ ನಿವಾಸಿ ವೆಂಕಟೇಶ್‌ ಅವರು ತಮ್ಮ ಪುತ್ರಿಯ ಆತ್ಮಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಶುಕ್ರವಾರ ರಾತ್ರಿ ತಮ್ಮದೇ ಗ್ರಾಮದ ಹರೀಶ್ ಎಂಬ ಯುವಕನನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದರಿಂದ ರೊಚ್ಚಿಗೆದ್ದು ಕೊಲೆಯಾದ ಯುವಕನ ಸಂಬಂಧಿಕರು ಶನಿವಾರ ಮಧ್ಯಾಹ್ನ ಆರೋಪಿಯ ಮನೆ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 26 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಸೋಮವಾರ 12 ಜನರನ್ನು ಬಂಧಿಸಿದ್ದರು. ಪೊಲೀಸರ ವಿಚಾರಣೆ ವೇಳೆ ಕೆಲವರು ಆರೋಪಿಯ ಮನೆ ಮೇಲೆ ದಾಳಿ ನಡೆಸಲು ನರೇಂದ್ರ ಅವರು ಪ್ರಚೋದನೆ ನೀಡಿದ್ದರು ಎಂದು ಬಾಯಿ ಬಿಟ್ಟಿದ್ದರು. ಗಲಾಟೆ ಸಂದರ್ಭದಲ್ಲಿ ಆರೋಪಿ ಘಟನಾ ಸ್ಥಳದಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

‘ಯೂಟ್ಯೂಬ್‌ ಚಾನೆಲ್‌ವೊಂದರ ವರದಿಗಾರ ಎಂದು ಹೇಳಿಕೊಂಡು ತಿರುಗುವ ನರೇಂದ್ರ ಎಂಬುವರು ವೆಂಕಟೇಶ್‌ ಅವರ ಮನೆ ಮೇಲೆ ದಾಳಿ ನಡೆದ ವೇಳೆ ವಿಡಿಯೊ ಚಿತ್ರೀಕರಣ ಮಾಡುತ್ತ ಜನರನ್ನು ಬೆಂಕಿ ಇಡುವಂತೆ ಪ್ರಚೋದನೆ ಮಾಡುತ್ತಿದ್ದರು. ಹೀಗಾಗಿ, ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT