ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಕೊರಗು: ಎಂ.ಟಿ.ಬಿ.ನಾಗರಾಜ್

Last Updated 5 ನವೆಂಬರ್ 2022, 7:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಮುದಾಯದ ಅಭಿವೃದ್ಧಿ ವಿಚಾರಗಳು ಬಂದಾಗ ರಾಜಕೀಯ ಬೆರೆಸಬಾರದು. ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು.

ನಗರದ ಚಾಮರಾಜಪೇಟೆಯಲ್ಲಿ ಶುಕ್ರವಾರ ಕುರುಬರ ಸಂಘದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎನ್ನುವುದು ರಾಜಕಾರಣದಲ್ಲಿ ಮಾತ್ರ. ಯಾವುದೇ ಪಕ್ಷದಲ್ಲಿರಿ ಆದರೆ ಸಮಾಜದ ವಿಚಾರ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು.ಜನವರಿ ಅಥವಾ ಫೆಬ್ರುವರಿಯಲ್ಲಿ ಇಲ್ಲಿ ಸಮಾವೇಶ ನಡೆಸಬೇಕು’ ಎಂದರು.

‘ಜಿಲ್ಲೆಯಲ್ಲಿ ಕುರುಬರ ಜನಸಂಖ್ಯೆ ಎಷ್ಟು ಇದೆ ಎನ್ನುವ ಮಾಹಿತಿ ನನಗೆ ಇದೆ.ಗೌರಿಬಿದನೂರಿನಲ್ಲಿ ಕುರುಬ ಸಮುದಾಯ ಜನಸಂಖ್ಯೆ 35 ಸಾವಿರವಿದೆ. ಬಾಗೇಪಲ್ಲಿಯಲ್ಲಿ 15 ಸಾವಿರ ಮತ್ತು ಚಿಕ್ಕಬಳ್ಳಾಪುರದಲ್ಲಿ 28 ಸಾವಿರ ಜನಸಂಖ್ಯೆ ಇದೆ. ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಕೊರಗು ಸಮುದಾಯಕ್ಕೆ ಇದೆ. ಯಾವುದೇ ಸರ್ಕಾರವಿದ್ದರೂ ನಮ್ಮ ಹಕ್ಕು ಕೇಳಲು ಹೋರಾಟ ಮಾಡುವ ಇಚ್ಛಾಶಕ್ತಿ ಇರಬೇಕು’ ಎಂದರು.

‘ನೂತನ ವಸತಿ ನಿಲಯದ ಜಾಗದಲ್ಲಿ ಈ ಹಿಂದೆಯೂ ಹಾಸ್ಟೆಲ್ ಇತ್ತು. ‌ನೂರಾರು ಮಂದಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದೆ. ಇಲ್ಲಿನ ಹಾಸ್ಟೆಲ್‌ನಲ್ಲಿದ್ದ ಅನೇಕರು ಈಗ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಮತ್ತೊಮ್ಮೆ ಇಲ್ಲಿ ಇಂತಹ ಉತ್ತಮ ಕಾರ್ಯವನ್ನು ನನ್ನ ಕೈಯಿಂದ ಮಾಡಿಸುತ್ತಿದ್ದಾರೆ’ ಎಂದರು.

ಎಂ.ಟಿ.ಬಿ ನಾಗರಾಜ್ ಮಾತಿನ ನಡುವೆ, ಸಮುದಾಯದವರು ಜಿಲ್ಲಾ ಮಟ್ಟದಲ್ಲಿ ನಿವೇಶನ ಕೊಡಿಸಬೇಕು ಎಂದು ಜೋರಾಗಿ ಕೂಗಿದರು. ‘ಈ ಹಿಂದೆ ಇಲ್ಲಿಂದ ಮಂತ್ರಿ, ಕೇಂದ್ರ ಸಚಿವರಾದವರನ್ನು ನಮಗೆ ಭೂಮಿ ಬೇಕು ಎಂದು ನೀವು ಕೇಳಬೇಕಿತ್ತು. ಏಕೆ ಕೇಳಲಿಲ್ಲ’ ಎಂದು ಸಚಿವರು ಪ್ರಶ್ನಿಸಿದರು.

ಆಗ ‘ನಮಗೆ ಇದುವರೆಗೂ ನಾಯಕರು ಇರಲಿಲ್ಲ. ಈಗ ಸಿಕ್ಕಿದ್ದಾರೆ’ ಎಂದು ಸಮುದಾಯದವರು ಘೋಷಣೆಗಳನ್ನು
ಕೂಗಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಸಮಾಜದ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ ಎಂದರು.

ಜಿಲ್ಲಾ ಪಂಚಾಯಿತಿಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ, ಸಮುದಾಯದ ಮುಖಂಡರಾದ ನಾಗರಾಜ್, ಮುನಿಯಪ್ಪ ಮತ್ತಿತರರು ಇದ್ದರು.

₹ 25 ಲಕ್ಷ ದೇಣಿಗೆ
ಚಿಕ್ಕಬಳ್ಳಾಪುರ ನಗರದಲ್ಲಿ ನಿರ್ಮಾಣವಾಗುತ್ತಿರುವ ಕುರುಬ ಸಮುದಾಯದ ಹಾಸ್ಟೆಲ್‌ಗೆ ಎಂಟಿಬಿ ಚಾರಿಟೇಬಲ್ ಟ್ರಸ್ಟ್‌ನಿಂದ ₹ 25 ಲಕ್ಷ ನೀಡುತ್ತೇನೆ ಎಂದು ಎಂ.ಟಿ.ಬಿ ನಾಗರಾಜ್ ಪ್ರಕಟಿಸಿದರು.

ಜಿಲ್ಲಾ ಕೇಂದ್ರದಲ್ಲಿ ‌ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಭೂಮಿ ಮಂಜೂರು ಮಾಡಿಸಿಕೊಡಲು ಸಿದ್ಧವಿದ್ದೇನೆ. ಅದಕ್ಕೂ ಮುನ್ನ ನೀವು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಭೂಮಿ ಒದಗಿಸುವಂತೆ ಕೋರಿ ಮನವಿ ಸಲ್ಲಿಸಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT