ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಪ್ರತಿಕಾರಕ್ಕೆ ಕೊಲೆ, ಆರೋಪಿ ಮನೆಗೆ ಬೆಂಕಿ

ಪ್ರೀತಿಗೆ ಪೋಷಕರ ವಿರೋಧದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ, ಮಗಳ ಪ್ರಿಯಕರನ ಇರಿದು ಕೊಂದ ತಂದೆ
Last Updated 25 ಜುಲೈ 2020, 12:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಸಮೀಪದ ಯಗವಮದ್ದಲಖಾನೆ ಗ್ರಾಮದಲ್ಲಿ ಮಗಳ ಸಾವಿಗೆ ಪ್ರತಿಕಾರವಾಗಿ ತಂದೆಯೊಬ್ಬ ಆಕೆಯ ಪ್ರಿಯಕರನನ್ನು ಶುಕ್ರವಾರ ರಾತ್ರಿ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯಾದ ಯುವಕನ ಕುಟುಂಬದವರು ರೊಚ್ಚಿಗೆದ್ದು ಶನಿವಾರ ಮಧ್ಯಾಹ್ನ ಆರೋಪಿಯ ಮನೆಗೆ ಬೆಂಕಿ ಇಟ್ಟಿದ್ಧಾರೆ.

ಯಗವಮದ್ದಲಖಾನೆ ನಿವಾಸಿ ಹರೀಶ್ (25) ಕೊಲೆಯಾದ ಯುವಕ. ಅದೇ ಗ್ರಾಮದ ಆರೋಪಿಗಳಾದ ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಹರೀಶ್ ಮತ್ತು ವೆಂಕಟೇಶ್ ಅವರ ಅಪ್ರಾಪ್ತ ವಯಸ್ಸಿನ ಪುತ್ರಿ ಪ್ರೀತಿಸುತ್ತಿದ್ದರು. ವಿಷಯ ತಿಳಿದು ವೆಂಕಟೇಶ್ ಅವರು ಗಲಾಟೆ ಮಾಡಿದ್ದ ವೇಳೆ ಪ್ರೀತಿಯ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪ್ರೀತಿಗೆ ಪೋಷಕರು ವಿರೋಧಿಸಿದ ಕಾರಣಕ್ಕೆ 10 ತಿಂಗಳ ಹಿಂದೆ ಬಾಲಕಿ ತಮ್ಮ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.

‘ಮಗಳ ಸಾವಿಗೆ ಪ್ರತಿಕಾರವಾಗಿ ಹರೀಶ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ವೆಂಕಟೇಶ್ ಅದಕ್ಕಾಗಿ ಸ್ನೇಹಿತ ಗಣೇಶ್ ಸಹಕಾರ ಪಡೆದಿದ್ದ. ಆರೋಪಿಗಳು ಶುಕ್ರವಾರ ರಾತ್ರಿ 11ರ ಸುಮಾರಿಗೆ ಬೈಕಿನಲ್ಲಿ ಹಿಂಬಾಲಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮೂರು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ಹರೀಶ್‌ ಅವರಿಗೆ ಎದೆ ಮತ್ತು ಕುತ್ತಿಗೆ ಭಾಗಕ್ಕೆ 19 ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅವರ ಕುಟುಂಬದವರು, ನೆಂಟರು ಸೇರಿ ವೆಂಕಟೇಶ್‌ ಅವರ ಮನೆ ಮೇಲೆ ದಾಳಿ ನಡೆಸಿ ಕಿಟಕಿ, ಬಾಗಿಲುಗಳನ್ನು ಒಡೆದು ಹಾಕುವ ಜತೆಗೆ ಮನೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು. ಹತ್ಯೆಯಾದ ಯುವಕನ ಶವವನ್ನು ಅವರ ಕುಟುಂಬದವರು ಆರೋಪಿ ವೆಂಕಟೇಶ್‌ ಅವರ ಮನೆ ಮುಂದೆಯೇ ಅಂತ್ಯಕ್ರಿಯೆ ಮಾಡುವುದಾಗಿ ಪಟ್ಟು ಹಿಡಿದ ಕಾರಣಕ್ಕೆ ಯಗವಮದ್ದಲಖಾನೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತ್ತು. ಎಸ್ಪಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT