ರೈತರ ತೋಟದಲ್ಲಿ ಮೊಳಗಿದ ಗಾನ ದುಂದುಭಿ

ಚಿಂತಾಮಣಿ: ಗ್ರಾಮೀಣ ಭಾಗದ ಕೃಷಿಕರೊಬ್ಬರು ತಮ್ಮ ತೋಟದಲ್ಲಿ ಗಾಯನ ಕಾರ್ಯಕ್ರಮ ಆಯೋಜಿಸುವ ಮೂಲಕ ಗಾನ ಕಲಾವಿದರಿಗೆ ಪ್ರೋತ್ಸಾಹ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರದಿಂದ 5 ಕಿ.ಮೀ ದೂರ ದಲ್ಲಿರುವ ಸೂರಪ್ಪನಹಳ್ಳಿಯ ಪ್ರಗತಿಪರ ರೈತ ಸುರೇಂದ್ರ ತಮ್ಮ ತೋಟದಲ್ಲಿ ನೂತನವಾಗಿ ಮುನೇಶ್ವರಸ್ವಾಮಿ ಗುಡಿಯನ್ನು ನಿರ್ಮಿಸಿದ್ದಾರೆ. ಗುಡಿಯ ಉದ್ಘಾಟನೆ ಸಮಯದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಜತೆಗೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಹೊಸತನಕ್ಕೆ ಮುನ್ನುಡಿ ಬರೆದಿದ್ದಾರೆ.
ಅನೇಕ ಹಿರಿಯ ಕಲಾವಿದರು, ಪುಟಾಣಿಗಳು ಗಾಯನದಲ್ಲಿ ಪಾಲ್ಗೊಂಡು ಜನಪದಗೀತೆ, ಭಾವ ಗೀತೆ, ನಾಡಗೀತೆ, ಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಹಸಿರು ಕಾನನದಲ್ಲಿ ಗಾನ ದುಂದುಭಿ ಮೊಳಗಿಸಿದರು.
ಕಲಾವಿದ ಸೀಕಲ್ ನರಸಿಂಹಪ್ಪ, ಪ್ರಮೀಳಮ್ಮ, ಕೆ.ಎಸ್.ಶಶಾಂತ್, ಎಸ್.ಯೋಜಿತಾ, ಇಫ್ಜಾನ್, ಮೊಹಿನುದ್ದೀನ್ ಅವರ ಕಂಠಸಿರಿಯಿಂದ ಮೂಡಿ
ಬಂದ ಗಾನ ಲಹರಿಗೆ ಸೀಕಲ್ ರಾಮಕೃಷ್ಣಪ್ಪ ಹಾರ್ಮೋನಿಯಂ, ಹಾಲೇರಿ ಸುಬ್ರಮಣಿ ಮತ್ತು ಜಂಗಮ ಶೀಗೇಹಳ್ಳಿ ಮುನಿನಾರಾಯಣಪ್ಪ ತಬಲ ನುಡಿಸುವ ಮೂಲಕ ಮೆರಗು ನೀಡಿದರು.
ಮುನೇಶ್ವರಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಪ್ರಗತಿಪರ ರೈತರಾದ ಕೋಡಿಹಳ್ಳಿ ಶ್ರೀನಾಥರೆಡ್ಡಿ, ಜನಪದ ಕಲಾವಿದ ಊಲವಾಡಿ ಎಸ್.ವಿ.ನಾರಾಯಣ ಸ್ವಾಮಿ, ಶೆಟ್ಟಹಳ್ಳಿ ಮುನಿನರಸಿಂಹಪ್ಪ, ಸೋರಪ್ಪಲ್ಲಿ ಲಕ್ಷ್ಮಿನರಸಮ್ಮ, ತಿಮ್ಮಪ್ಪ, ಗೌತಮಿ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.