ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯು ಗುರುವಾರ ಕರೆದಿದ್ದ ‘ಹರಾಜು’ ಪ್ರಕ್ರಿಯೆಯನ್ನು ಮತ್ತೆ ಮುಂದೂಡಲಾಗಿದೆ. ನಗರಸಭೆಯ ಹರಾಜು ಪ್ರಹಸನಗಳು ಕಣ್ಣಾ ಮುಚ್ಚಾಲೆ ರೀತಿಯಾಗಿದೆ.
ಜನಪ್ರತಿನಿಧಿಗಳ ‘ಹಸ್ತಕ್ಷೇಪ’ವೇ ಈ ಹರಾಜು ಪ್ರಹಸನಗಳಿಗೆ ಮೂಲ ಕಾರಣ. ಹಸ್ತಕ್ಷೇಪದ ಕಾರಣ ಅಧಿಕಾರಿಗಳು ಸಹ ಅಸಹಾಯಕರಾಗಿದ್ದಾರೆ ಎನ್ನುವ ಮಾತುಗಳಿವೆ.
ನಗರಸಭೆ ವ್ಯಾಪ್ತಿಯ ನೆಲಸುಂಕ ವಸೂಲಿ ಮಾಡುವ ಹಕ್ಕು, ಕೋರ್ಟ್ ಮುಂಭಾಗ ಮತ್ತು ನಕ್ಕಲಕುಂಟೆಯಲ್ಲಿರುವ ಹುಣಸೆಮರಗಳ ಫಸಲಿನ ಹರಾಜು, ವಾರ್ಡ್ ನಂ 20ರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ (ಬಿ.ಬಿ ರಸ್ತೆ) ಶೌಚಾಲಯ ನಿರ್ವಹಣೆ ಮತ್ತು ಶುಲ್ಕ ವಸೂಲಿ ಹಕ್ಕು ಮತ್ತು ಖಾಸಗಿ ಬಸ್ ನಿಲ್ದಾಣದ ವಾಹನ ನಿಲುಗಡೆ ಶುಲ್ಕಕ್ಕೆ ಸಂಬಂಧಿಸಿದಂತೆ ಗುರುವಾರ ನಗರಸಭೆ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಸಬೇಕಾಗಿತ್ತು. ಈ ವಿಚಾರವಾಗಿ ಸದಸ್ಯರಿಗೆ ನೋಟಿಸ್ ಸಹ ನೀಡಲಾಗಿತ್ತು.
ಆದರೆ ಗುರುವಾರ ಹರಾಜು ಪ್ರಕ್ರಿಯೆ ನಡೆಯಲಿಲ್ಲ. ಇದು ಚಿಕ್ಕಬಳ್ಳಾಪುರ ನಗರಸಭೆ ಸದಸ್ಯರು, ನಾಗರಿಕರು ಮತ್ತು ಹರಾಜಿನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದವರಲ್ಲಿ ಅಚ್ಚರಿಗೆ ಕಾರಣವಾಗಿದೆ.
ಎರಡನೇ ಬಾರಿ ಮುಂದೂಡಿಕೆ: ಈ ಹಿಂದೆ ಜೂ.21ರಂದು ಹರಾಜು ನಡೆಸಲು ನಗರಸಭೆಯು ದಿನ ನಿಗದಿಗೊಳಿಸಿತ್ತು. ಆದರೆ ಅಂತಿಮ ಸಮಯದಲ್ಲಿ ಈ ಹರಾಜನ್ನು ಸಹ ರದ್ದುಗೊಳಿಸಲಾಯಿತು. ಮತ್ತೆ ಎರಡನೇ ಬಾರಿಗೆ ಹರಾಜು ಪ್ರಕ್ರಿಯೆ ನಡೆಸಲು ನಗರಸಭೆ ಮುಂದಾಗಿತ್ತು. ಆ. 22ರಂದು ಹರಾಜು ನಡೆಸುವುದಾಗಿ ತಿಳಿಸಿ ಸದಸ್ಯರಿಗೆ ನೋಟಿಸ್ ನೀಡಿತ್ತು.
ಹೀಗೆ ಹರಾಜು ಪ್ರಕ್ರಿಯೆಗಳನ್ನು ಮುಂದೂಡುತ್ತಿರುವ ಕಾರಣ ನಗರಸಭೆ ಆದಾಯವೂ ಖೋತಾ ಆಗುತ್ತಿದೆ. ಅವಧಿ ಮುಗಿದ ನಂತರ ನೆಲ ಸುಂಕ ಎಷ್ಟು ವಸೂಲಾಗಿದೆ, ನಗರಸಭೆಯ ಖಾತೆ ಸೇರಿದೆಯೇ ಎನ್ನುವ ಚರ್ಚೆಯೂ ಇದೆ.
ಹರಾಜಿಗೆ ಜನಪ್ರತಿನಿಧಿಗಳು ತೋರುತ್ತಿರುವ ಹಸ್ತಕ್ಷೇಪವು ಅಧಿಕಾರಿಗಳನ್ನು ಅಡ ಕತ್ತರಿಯಲ್ಲಿ ಸಿಲುಕಿಸಿದೆ. ಹರಾಜಿನ ಲಾಬಿ ಈ ಹಿಂದಿನ ನಗರಸಭೆ ಪೌರಾಯುಕ್ತ ಮಂಜುನಾಥ್ ಅವರ ವರ್ಗಾವಣೆಗೂ ಕಾರಣವಾಗಿದೆ.
ಚಿಕ್ಕಬಳ್ಳಾಪುರ ನಗರಸಭೆ ಇತಿಹಾಸದಲ್ಲಿ ನ್ಯಾಯಾಲಯದ ಮೊರೆ ಹೋಗಿ ‘ಅರ್ಹತೆ’ಯ ಕಾರಣದಿಂದ ಪೌರಾಯುಕ್ತರನ್ನು ಬದಲಾಯಿಸಿದ್ದು ಇದೇ ಮೊದಲು. ಈ ಹಿಂದಿನ ಪೌರಾಯುಕ್ತರಲ್ಲಿ ಬಹಳಷ್ಟು ಮಂದಿ ‘ಅರ್ಹತೆ’ ಇಲ್ಲದಿದ್ದರೂ ಈ ಬಗ್ಗೆ ಯಾರೂ ಪ್ರಶ್ನಿಸಿರಲಿಲ್ಲ. ಜಿಲ್ಲೆಯ ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ‘ಅರ್ಹತೆ’ ಹೊಂದಿರುವವರು ಪೌರಾಯುಕ್ತರಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಿದ್ದರೂ ಚಿಕ್ಕಬಳ್ಳಾಪುರ ಪೌರಾಯುಕ್ತರ ಅರ್ಹತೆಯನ್ನು ಮಾತ್ರ ಪ್ರಶ್ನಿಸಲಾಯಿತು. ಇದರ ಹಿಂದೆ ಇದಿದ್ದು ‘ಹರಾಜಿನ ಲಾಬಿ’.
ಸಂಘಟನೆಗಳೂ ಮೌನ
ಹರಾಜಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ನಾನಾ ರೀತಿಯ ‘ಲಾಭಿ’ಗಳು ಬೆಳವಣಿಗೆಗಳು ನಡೆಯುತ್ತಿವೆ. ನಗರಸಭೆ ಪೌರಾಯುಕ್ತರ ವರ್ಗಾವಣೆಯೂ ಆಗಿದೆ. ನಗರಸಭೆಯ ಆದಾಯ ಖೋತಾ ತಡೆಗೆ ಮುಂದಾಗಿದ್ದ ಪೌರಾಯುಕ್ತ ಮಂಜುನಾಥ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ನಾಗರಿಕ ಸಂಘಟನೆಗಳು ಮಾತ್ರ ಮೌನವಹಿಸಿವೆ.
ನಗರಸಭೆಯಿಂದಲೇ ನೆಲ
ಸುಂಕ ವಸೂಲಿ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ವ್ಯಾಪಾರಿಗಳಿಂದ ನೆಲ ಸುಂಕ ವಸೂಲಿ ಮಾಡುವ ಗುತ್ತಿಗೆಯ ಅವಧಿಯು ಏ.5ಕ್ಕೆ ಪೂರ್ಣವಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸುಂಕ ವಸೂಲಿ ಹರಾಜು ಪ್ರಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ನಗರಸಭೆ ಸಿಬ್ಬಂದಿ ಸುಂಕ ವಸೂಲಿ ಮಾಡುತ್ತಿದ್ದರು. ಟೆಂಡರ್ ಆಗುವವರೆಗೆ ನಗರಸಭೆಯಿಂದ ಸುಂಕ ವಸೂಲಿ ಮಾಡಲು ನಿರ್ಧರಿಸಲಾಗಿತ್ತು. ಈ ನಡುವೆ ಶಾಸಕ ಪ್ರದೀಪ್ ಈಶ್ವರ್ ತಾವೇ ನೆಲ ಸುಂಕ ಭರಿಸುವುದಾಗಿ ವ್ಯಾಪಾರಿಗಳಿಗೆ ಭರವಸೆ ನೀಡಿದರು. ಅಲ್ಲಿಂದ ಇಲ್ಲಿಯವರೆಗೆ ನೆಲಸುಂಕದ ಹರಾಜು ಪ್ರಕ್ರಿಯೆ ನಡೆದಿಲ್ಲ. ನಗರಸಭೆಯೇ ಈಗ ನೆಲ ಸುಂಕ ವಸೂಲಿ ಮಾಡುತ್ತಿದೆ.
‘ಶೀಘ್ರ ದಿನಾಂಕ ನಿಗದಿ’
ಹರಾಜಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಚಾರ ನಡೆಸಿಲ್ಲ ಎಂದು ಬಹಳಷ್ಟು ಮಂದಿ ತಿಳಿಸಿದರು. ಆ ಕಾರಣದಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿ ಶೀಘ್ರದಲ್ಲಿಯೇ ಹರಾಜಿಗೆ ದಿನ ನಿಗದಿಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಉಮಾಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.