ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿಗೆ ನಂದಿ ಪಂಚಾಯಿತಿ ಕಸ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ವೈರಲ್; ಕಸವಿಲೇವಾರಿಗಿಲ್ಲ ಸ್ಥಳ
Last Updated 4 ಆಗಸ್ಟ್ 2022, 15:41 IST
ಅಕ್ಷರ ಗಾತ್ರ

ನಂದಿ (ಚಿಕ್ಕಬಳ್ಳಾಪುರ): ತಾಲ್ಲೂಕಿ ನಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನುತಿರ್ನಹಳ್ಳಿ ಹಾಗೂ ಭೈರನಾಯಕನಹಳ್ಳಿ ನಡುವಿನ ರಸ್ತೆ ಬದಿಗೆ ಸುರಿಯಲಾಗುತ್ತಿದ್ದು ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪರಿಸರವಾದಿಗಳುಈ ವಿಷಯವನ್ನು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತದ ಗಮನ ಸಹ ತಂದಿದ್ದಾರೆ.ಗ್ರಾಮ ಪಂಚಾಯಿತಿಯ ಕಸ ಸಂಗ್ರಹ ವಾಹನವು ಕಸವನ್ನು ರಸ್ತೆ ಬದಿ ಸುರಿಯುತ್ತಿರುವ ವಿಡಿಯೊಗಳನ್ನು ಕಂಡು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಂದಿ ಗ್ರಾಮವು ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿಯೂ ಪ್ರಸಿದ್ಧವಾದದು. ಇಲ್ಲಿನ ಭೋಗ ನಂದೀಶ್ವರ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳ ಜನರು ಸಹ ಭೇಟಿ ನೀಡುವರು.

‘ಸ್ವಚ್ಛ ಭಾರತ ಇದು. ಸ್ಥಳೀಯ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಪರಿಯಿದು. ಗ್ರಾಮಗಳಲ್ಲಿ ಸಂಗ್ರಹಿಸುವ ಕಸವನ್ನು ರಸ್ತೆ ಬದಿ ತಂದು ಸುರಿಯುವುದು ಸ್ವಚ್ಛ ಭಾರತದ ಕನಸೇ..? ತ್ಯಾಜ್ಯ ನಿರ್ವಹಣೆಗೆ ವಿಶೇಷವಾದ ಕಾಳಜಿ ಮತ್ತು ಸಾಮಾನ್ಯನ ತೆರಿಗೆ ಹಣದ ವ್ಯಯ. ಇದ್ಯಾವ ಸೀಮೆ ಸ್ವಚ್ಛತೆಯೋ ದೇವರೇ ಬಲ್ಲ’ ಎಂದು‘ಉಸಿರಿಗಾಗಿ ಹಸಿರು’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಗಂಗಾಧರ ರೆಡ್ಡಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಸ್ತೆಯಲ್ಲಿ ಸಂಚರಿಸುವವರು ದುರ್ವಾಸನೆಯನ್ನು ಮೂಗು ಮುಚ್ಚಿಕೊಂಡು ಬಹಳ ಆನಂದದಿಂದಲೇ ಸಹಿಸಿಕೊಂಡು ಪ್ರಯಾಣಿಸುವರು. ಜಿಲ್ಲಾ ಪಂಚಾಯಿತಿ ಸಿಇಒ ಅವರುನರೇಗಾ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುವರು. ಆದರೆ ಅವರ ಅಧಿಕಾರದ ವ್ಯಾಪ್ತಿಯಲ್ಲಿರುವ ಪಂಚಾಯಿತಿಗಳಲ್ಲಿ ಸಮಸ್ಯೆಗಳೇ ಇಲ್ಲ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಈಎಲ್ಲ ಕಾರ್ಯಗಳಿಗೆ ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಹಣವನ್ನೇ ಹೊರತು ಸ್ವಂತ ಹಣವನ್ನಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮ್ಮದು ಚಿಕ್ಕಬಳ್ಳಾಪುರ‘ ಫೇಸ್‌ಬುಕ್ ಪುಟದಲ್ಲಿಯೂ ಈ ವಿಡಿಯೊಗಳನ್ನು ಪ್ರಕಟಿಸಲಾಗಿದೆ.

**

ಕಸ ಸುರಿಯಲು ಜಾಗವಿಲ್ಲ

ನಂದಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯ ನಾಲ್ಕು ಲೋಡ್ ಕಸ ಸಂಗ್ರಹವಾಗುತ್ತದೆ. ಆದರೆ ಕಸ ವಿಲೇವಾರಿಗೆ ಜಾಗವೇ ಇಲ್ಲ. ಜಾಗ ನೀಡುವಂತೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಂದಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಿರ್ನಹಳ್ಳಿಯ ಖಾಲಿ ಜಾಗದಲ್ಲಿ ಕಸವನ್ನು ಹಾಕಲಾಗುತ್ತಿತ್ತು. ಅಲ್ಲಿ ಮಳೆ ಬಂದ ಕಾರಣ ಜಾಗ ತೇವವಾಗಿತ್ತು. ಅಲ್ಲಿಗೆ ಹೋಗಲು ಸಾಧ್ಯವಿಲ್ಲದ ಕಾರಣ ಇಲ್ಲಿಗೆ ಕಸವನ್ನು ಹಾಕಿದ್ದಾರೆ. ರಸ್ತೆ ಬದಿ ಸುರಿದ ಕಸವನ್ನು ತೆರವುಗೊಳಿಸಲಾಗಿದೆ. ಕಸ ವಿಲೇವಾರಿಗೆ ಸೂಕ್ತ ಸ್ಥಳ ನೀಡಿದರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT