ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ‘ಎನ್‌ಆರ್‌ಸಿ’ಗೆ ರಾಷ್ಟ್ರಮಟ್ಟದ ಮೆಚ್ಚುಗೆ

Last Updated 10 ಸೆಪ್ಟೆಂಬರ್ 2019, 7:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆಯಲ್ಲಿರುವ ‘ಅಪೌಷ್ಟಿಕ ಮಕ್ಕಳ ಪುನಃಶ್ಚೇತನ ಮತ್ತು ತಾಯಂದಿರ ಕುಶಲ, ಕೌಶಲ ಕೇಂದ್ರ’ದ (ಎನ್‌ಆರ್‌ಸಿ) ಕಾರ್ಯವೈಖರಿಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


ದೆಹಲಿಯಲ್ಲಿ ಸೋಮವಾರ ನಡೆದ ವಿವಿಧ ರಾಜ್ಯಗಳಲ್ಲಿನ ‘ತೀವ್ರ ಅಪೌಷ್ಟಿಕತೆಯ ಸಮುದಾಯ ನಿರ್ವಹಣೆ’ ಮತ್ತು ಆರು ತಿಂಗಳ ಒಳಗಿನ ಅಪೌಷ್ಟಿಕ ಶಿಶುಗಳ ನಿರ್ವಹಣೆ ಕುರಿತ ಪ್ರಾಯೋಗಿಕ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಿಕ್ಕಬಳ್ಳಾಪುರ ಎನ್‌ಆರ್‌ಸಿ ವೈದ್ಯರ ಕಾರ್ಯಕ್ಕೆ ಶ್ಲಾಘನೆ ದೊರೆತಿದೆ.


ಕೇಂದ್ರ ಆರೋಗ್ಯ ಸಚಿವಾಲಯದ ಉಪ ಆಯುಕ್ತೆ ಶೀಲಾ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಂದೆ ಚಿಕ್ಕಬಳ್ಳಾಪುರ ಎನ್ಆರ್‌ಸಿ ಮುಖ್ಯಸ್ಥೆ ಡಾ.ಗಾಯತ್ರಿ ಮತ್ತು ಆಹಾರ ತಜ್ಞೆ ಡಾ.ಆರ್.ಮಂಜುಳಾ ಅವರು ತಮ್ಮ ಕೇಂದ್ರ ಸಾಧಿಸಿರುವ ಪ್ರಗತಿಯ ಮಾಹಿತಿಯನ್ನು ಮಂಡಿಸಿದರು.


ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡಾ.ಗಾಯತ್ರಿ, ‘ಜಿಲ್ಲೆಯಲ್ಲಿ 2012ರಿಂದಲೂ ಎನ್‌ಆರ್‌ಸಿ ಅಸ್ತಿತ್ವದಲ್ಲಿದೆ. ಆದರೆ ಅದಕ್ಕೆ ಈ ಹಿಂದೆ ಯಾವುದೇ ಮೂಲಸೌಕರ್ಯಗಳಿರಲಿಲ್ಲ. ಜಿಲ್ಲಾ ಆಸ್ಪತ್ರೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಅದಕ್ಕಾಗಿಯೇ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್‌, ವೈದ್ಯರ ತಂಡ ನಿಯೋಜಿಸುವ ಜತೆಗೆ ಮೂಲಸೌಕರ್ಯ ಒದಗಿಸಲಾಗಿತ್ತು’ ಎಂದು ಹೇಳಿದರು.


‘2017ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಆರು ತಿಂಗಳ ಒಳಗಿನ ಅಪೌಷ್ಟಿಕ ಶಿಶುಗಳ ನಿರ್ವಹಣೆ ಕುರಿತ ಸಂಶೋಧನೆಯ ಪ್ರಾಯೋಗಿಕ ಯೋಜನೆಗೆ ಎನ್‌ಆರ್‌ಸಿಗಳ ಹುಡುಕಾಟ ಆರಂಭಿಸಿದ ವೇಳೆ ದಕ್ಷಿಣ ಭಾರತದಿಂದ ಆಗ ಚಿಕ್ಕಬಳ್ಳಾಪುರ ಎನ್‌ಆರ್‌ಸಿ ಒಂದೇ ಆಯ್ಕೆಯಾಗಿತ್ತು. ನಮಗೆ ನವೆಂಬರ್ 2017ರಲ್ಲಿ ದೆಹಲಿಯಲ್ಲಿ ತರಬೇತಿ ನೀಡಲಾಗಿತ್ತು’ ಎಂದು ತಿಳಿಸಿದರು.


‘ನಮ್ಮ ಎನ್‌ಆರ್‌ಸಿಯಲ್ಲಿ ಒಂದು ತಿಂಗಳಿಂದ 5 ವರ್ಷದ ಒಳಗಿನ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. ವಿಶೇಷವಾಗಿ ಕಳೆದ ಫೆಬ್ರವರಿಯಿಂದ ಜುಲೈ ಒಳಗೆ ನಮ್ಮ ಕೇಂದ್ರದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ 6 ತಿಂಗಳ ಒಳಗಿನ 30 ಶಿಶುಗಳನ್ನು ದಾಖಲಿಸಿಕೊಂಡು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿದ್ದೇವೆ. ಎಲ್ಲ ಶಿಶುಗಳ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಅದರ ಆಧಾರದಲ್ಲಿ ನಮಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT