ಶನಿವಾರ, ಮೇ 21, 2022
20 °C

ಶಾಸಕರಿಂದ ಡೈರಿ ಕಾರ್ಯದರ್ಶಿಗೆ ನಿಂದನೆ: ಆಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರಿಗೆ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವಾಚ್ಯ ಶಬ್ದ ಬಳಕೆ ಮಾಡಿ ನಿಂದನೆ ಮಾಡಿದ್ದಾರೆ ಎನ್ನಲಾದ ಮೊಬೈಲ್ ಕರೆಯ ಧ್ವನಿಸುರುಳಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‌ಕೋಚಿಮುಲ್ ಒಕ್ಕೂಟವನ್ನು ಅವಿಭಜಿತ ಕೋಲಾರ ಜಿಲ್ಲೆಯಿಂದ ವಿಭಜನೆ ಮಾಡಿ ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕ ಒಕ್ಕೂಟ ಮಾಡುವ ವಿಚಾರ ಚರ್ಚೆಯಲ್ಲಿದೆ. ಒಂದು ಬಣ ಒಕ್ಕೂಟವನ್ನು ಪ್ರತ್ಯೇಕ‌ ಮಾಡುವಂತೆ ಹೋರಾಟ ಮಾಡುತ್ತಿದ್ದರೆ, ಮತ್ತೊಂದು ಬಣ ಅದನ್ನು ತಡೆಯಲು ಪ್ರಯತ್ನ ಮಾಡುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಹಾಲು‌ ಉತ್ಪಾದಕರ ಸಹಕಾರ‌ ಸಂಘದ ಕಾರ್ಯದರ್ಶಿಯೊಬ್ಬರು ಶಾಸಕರ ಮಾತಿನಂತೆ ಕೋಚಿಮುಲ್ ‌ಪ್ರತ್ಯೇಕ ಮಾಡುವುದು ನಮಗೆ ಸಹಮತವಿಲ್ಲ ಎಂಬಂತೆ ಒಪ್ಪಿಗೆ ಪತ್ರ ಸಿದ್ಧಗೊಳಿಸಿ ತಾಲ್ಲೂಕಿನ ಎಲ್ಲ ಸಂಘದ ಕಾರ್ಯದರ್ಶಿಗಳಿಂದ ಸಹಿ ಮಾಡಿಸುತ್ತಿರುವುದಾಗಿ ತಿಳಿದು‌ ಬಂದಿದೆ. ಒಬ್ಬ ಕಾರ್ಯದರ್ಶಿ ಸಹಿ ಮಾಡಲು ನಿರಾಕರಿಸಿದ್ದು, ಇದಕ್ಕೆ ಶಾಸಕರೇ ಕಾರ್ಯದರ್ಶಿಗೆ ಕರೆ ಮಾಡಿ ಸಹಿ‌ ಮಾಡುವಂತೆ ತಿಳಿಸಿದ್ದಾರೆ. ಅದಕ್ಕೆ ಕಾರ್ಯದರ್ಶಿ ನೀಡಿದ ಪ್ರತ್ಯುತ್ತರಕ್ಕೆ ಶಾಸಕರು ಕೋಪಗೊಂಡು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ.

‌ಈ ಧ್ವನಿ ಸುರುಳಿಗೆ ಸಂಬಂಧಿಸಿ ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ, ಶಾಸಕರು ತಮ್ಮ ಆಪ್ತರ ಮೂಲಕ ತಾಲ್ಲೂಕಿನ ಎಲ್ಲ ಡೈರಿ ಕಾರ್ಯದರ್ಶಿಗಳಿಂದ ಒತ್ತಾಯಪೂರ್ವಕವಾಗಿ ಒಕ್ಕೂಟ ಪ್ರತ್ಯೇಕವಾಗಲು ನಮ್ಮ ಸಹಮತವಿಲ್ಲ ಎಂದು ಸಹಿ ಪಡೆಯುತ್ತಿದ್ದಾರೆ. ಇದಕ್ಕೆ ಒಪ್ಪದ ಕಾರ್ಯದರ್ಶಿಯನ್ನು ಶಾಸಕರು ಅವಾಚ್ಯ ಶಬ್ದ ಬಳಕೆ ಮಾಡಿ ಬೈದಿದ್ದಾರೆ. ಶಾಸಕರು ನಿಂದನೆ ಮಾಡಿರುವುದನ್ನು ಖಂಡಿಸುತ್ತೇನೆ‌. ಮುಂದಿನ ದಿನಗಳಲ್ಲಿ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಡೈರಿ ಕಾರ್ಯದರ್ಶಿ ಶಿಸ್ತು ಮತ್ತು ಬದ್ಧತೆಯಿಲ್ಲದೆ ಪ್ರತ್ಯುತ್ತರ ನೀಡಿದಾಗ ಅವರಿಗೆ ಬುದ್ದಿ ಕಲಿಸಬೇಕಾದ ಸಲುವಾಗಿ ತಿಳಿ‌ ಹೇಳಲಾಗಿದೆ. ಸಮಾಜದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಶಿಸ್ತು, ಸಂಯಮ ಹಾಗೂ ಬದ್ಧತೆ ಅಗತ್ಯ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು