ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರಿಗೆ ತಪ್ಪದ ಬಸ್‌ ಗೋಳು

ಗೌರಿಬಿದನೂರು ಗ್ರಾಮೀಣ ಭಾಗಗಳಲ್ಲಿ ಬಗೆಹರಿಯದ ಸಾರಿಗೆ ಸಮಸ್ಯೆ
Last Updated 20 ಡಿಸೆಂಬರ್ 2021, 2:23 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ನಿತ್ಯ ಸಾರಿಗೆ ಸಂಪರ್ಕದ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಹಲವು‌ ವರ್ಷಗಳಿಂದಲೂ‌ ಸಮಸ್ಯೆ ಬಗೆಹರಿಯದೆ ಕಗ್ಗಂಟಾಗಿದೆ.

ಗೌರಿಬಿದನೂರು, ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ ವ್ಯಾಪ್ತಿ ಒಳಗೊಂಡಿದೆ. ಪ್ರತಿದಿನ ನೂರಾರು ಮಂದಿ ಸಾರಿಗೆ ವ್ಯವಸ್ಥೆಯ‌ ಮೂಲಕ ನಗರ ಪ್ರದೇಶಗಳಿಗೆ ಬಂದು ತಮ್ಮ ನಿತ್ಯದ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿ ಸಂಜೆ ಸ್ವಗ್ರಾಮಗಳಿಗೆ ತೆರಳುವರು.

ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕು ಕೇಂದ್ರಕ್ಕೆ ಬರುವರು. ಇವರು ತಮ್ಮ ಜ್ಞಾನಾರ್ಜನೆಗಾಗಿ ಗ್ರಾಮದಿಂದ ನಗರ ಪ್ರದೇಶಗಳಲ್ಲಿನ ಪ್ರತಿಷ್ಠಿತ ಶಾಲಾ ಕಾಲೇಜುಗಳಿಗೆ ಬರಲು ಸರ್ಕಾರಿ ಸಾರಿಗೆ ವ್ಯವಸ್ಥೆ ಅವಲಂಬಿಸಿದ್ದಾರೆ. ವಿದ್ಯಾರ್ಥಿ ಬಸ್ ಪಾಸ್ ಪಡೆದಿದ್ದಾರೆ.

ತಾಲ್ಲೂಕಿನ ನಗರಗೆರೆ, ವಾಟದಹೊಸಹಳ್ಳಿ, ಕುಡುಮಲಕುಂಟೆ, ವಿದುರಾಶ್ವತ್ಥ, ಕೋಟಾಲದಿನ್ನೆ, ಹೊಸೂರು, ತರಿದಾಳು, ಅಲೀಪುರ, ಕಲ್ಲಿನಾಯಕನಹಳ್ಳಿ, ತೊಂಡೇಬಾವಿ, ಮಂಚೇನಹಳ್ಳಿ, ಡಿ.ಪಾಳ್ಯ ಸೇರಿದಂತೆ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ನಿತ್ಯ ಪ್ರಯಾಣ ಬೆಳೆಸುತ್ತಾರೆ.

ಆದರೆ ಈ ಭಾಗಗಳಲ್ಲಿ ನಿಗದಿತ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಬಂದರೂ‌ ಕೂಡ ಗ್ರಾಮಗಳ‌ ಬಳಿ ನಿಲ್ಲಿಸದೆ ಸಾಗುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ‌ ಸಂಕಷ್ಟ ಎದುರಾಗುತ್ತಿದೆ. ಗ್ರಾಮದ ಅಥವಾ ಕ್ರಾಸ್ ಮೂಲಕ ಸಾಗುವ ಸರ್ಕಾರಿ ಬಸ್‌ಗಳಿಗೆ ವಿದ್ಯಾರ್ಥಿಗಳಿಂದ ಹಣ ಸಂಗ್ರಹಣೆ ಆಗುವುದಿಲ್ಲ‌. ಎಲ್ಲರೂ ರಿಯಾಯಿತಿ ಪಾಸ್ ಹೊಂದಿರುವ ಕಾರಣ ನಿತ್ಯದ ಕಲೆಕ್ಷನ್ ಗೆ ಸಮಸ್ಯೆಯಾಗುತ್ತದೆ ಎಂದು ಬಸ್ ನಿರ್ವಾಹಕರು‌ ಮತ್ತು ಚಾಲಕರು ವಿದ್ಯಾರ್ಥಿಗಳನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎನ್ನುವ ದೂರು ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿದೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಸ್ಥಳೀಯರ ಸಹಕಾರದಿಂದ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟಿಸಿದ ನಿದರ್ಶನಗಳಿವೆ. ಸಾರಿಗೆ ಇಲಾಖೆಯು ‌ಗ್ರಾಮೀಣ‌ ಭಾಗದ ಸೇವೆಗಾಗಿಯೇ ಪ್ರತ್ಯೇಕ ಬಸ್‌ಗಳನ್ನು ನಿಯೋಜಿಸಿದೆ. ಹೀಗಿದ್ದರೂ ಬಸ್ ನಿರ್ವಾಹಕ ಮತ್ತು ಚಾಲಕರು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎನ್ನುವ ದೂರು ಇದೆ.

ಗೌರಿಬಿದನೂರು ತಾಲ್ಲೂಕು ನೆರೆಯ ಆಂಧ್ರಪ್ರದೇಶದ ಗಡಿ‌ಭಾಗದಲ್ಲಿದೆ. ರಾಜ್ಯದ ಸಾರಿಗೆ ಬಸ್‌ಗಳು ‌ಹಿಂದೂಪುರ, ಅನಂತಪುರ, ಧರ್ಮಾವರಂ ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳುತ್ತವೆ. ಇವುಗಳು ‌ಬೆಂಗಳೂರಿನಿಂದ ಬರುವ ಮಾರ್ಗ ಮಧ್ಯೆ ತಾಲ್ಲೂಕಿನ ‌ತಿಪ್ಪಗಾನಹಳ್ಳಿ, ಬಂದಾರ್ಲಹಳ್ಳಿ, ಕಲ್ಲಿನಾಯಕನಹಳ್ಳಿ, ತೊಂಡೇಬಾವಿ, ಅಲಕಾಪುರ, ವಿದುರಾಶ್ವತ್ಥ ಮತ್ತಿತರ ಸ್ಥಳಗಳಿವೆ. ಆದರೆ ರಾಜ್ಯದ ಈ ಬಸ್‌ ನಿರ್ವಾಹಕರು ಇದು‌ ಅಂತರರಾಜ್ಯ ಬಸ್. ವಿದ್ಯಾರ್ಥಿ ‍ಪಾಸ್‌ಗೆ ಅವಕಾಶವಿಲ್ಲ ಎನ್ನುತ್ತಾರೆ.

ಖಾಸಗಿ ಬಸ್‌ ಮೇಲೆ ವಿದ್ಯಾರ್ಥಿಗಳ ಸವಾರಿ: ನಿಗದಿತ ಸಮಯಕ್ಕೆ ಸರ್ಕಾರಿ ಸಾರಿಗೆ ಬಸ್‌ಗಳು ಸಂಚರಿಸದ ವೇಳೆ ಹಾಗೂ ನಿಲುಗಡೆ ಮಾಡದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತಲುಪುವ ಭರಾಟೆಯಲ್ಲಿ ಖಾಸಗಿ ಬಸ್‌
ಗಳನ್ನು ಅವಲಂಬಿಸುತ್ತಿದ್ದಾರೆ. ಅವುಗಳಲ್ಲಿ ಸ್ಥಳಾವಕಾಶ ಇಲ್ಲದ ವೇಳೆ ನಿಯಮಗಳನ್ನು ಮೀರಿ ಬಸ್‌ ಮೇಲೇರಿ ಹಳ್ಳಿಯಿಂದ ಪಟ್ಟಣ ಪಟ್ಟಣದಿಂದ ಹಳ್ಳಿಗೆ ತೆರಳುವರು.

ಈ ಸಮಸ್ಯೆ ವಿದ್ಯಾರ್ಥಿಗಳನ್ನಷ್ಟೇ ಬಾಧಿಸುತ್ತಿಲ್ಲ. ಕೆಲಸಗಳ ನಿಮಿತ್ತ ನಗರಗಳಿಗೆ ಬಂದ ಕೂಲಿ ಕಾರ್ಮಿಕರು, ಜನಸಾಮಾನ್ಯರು ಮರಳಿ ಹಳ್ಳಿಗಳಿಗೆ ಹೋಗಲು ಸರ್ಕಾರಿ ಬಸ್‌ಗಳನ್ನು ಸೂಕ್ತ ವ್ಯವಸ್ಥೆಗಳು ಸಹ ಇಲ್ಲ ಎನ್ನುವ ಆರೋಪವಿದೆ.

ಗ್ರಾಮಕ್ಕೆ ಬಸ್ ಇಲ್ಲ

ಗ್ರಾಮೀಣ ‌ಭಾಗದಿಂದ ನಗರಕ್ಕೆ ಬಂದು ಕಾಲೇಜಿನಲ್ಲಿ‌ ವಿದ್ಯಾಭ್ಯಾಸ ನಡೆಸಲು ಸರ್ಕಾರಿ ಸಾರಿಗೆ ಅತ್ಯವಶ್ಯಕವಾಗಿದೆ. ತಾಲ್ಲೂಕಿನ ಗಡಿ‌ಭಾಗಕ್ಕೆ ಸಮರ್ಪಕವಾದ
ಸಾರಿಗೆ ವ್ಯವಸ್ಥೆ ಇಲ್ಲದೆ ಪರಿತಪಿಸುವಂತಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿ
ನಿಧಿಗಳು ಬದ್ಧತೆ ಮತ್ತು ಇಚ್ಛಾಶಕ್ತಿ ತೋರಬೇಕು.

ಮುಜೀಬ್,‌ ಕಾಲೇಜು ವಿದ್ಯಾರ್ಥಿ, ನಗರಗೆರೆ

ಸಮಯಕ್ಕೆ ಬರಲಿ

ಗ್ರಾಮೀಣ ಭಾಗದ
ನಾಗರಿಕರು‌ ಮತ್ತು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮೂಲ ಸೌಕರ್ಯವಾಗಿದೆ. ಇದನ್ನು ನಿಗದಿತ ಸಮಯಕ್ಕೆ‌ ನೀಡುವ ಜವಾಬ್ದಾರಿ ಸಾರಿಗೆ ಇಲಾಖೆಯ ‌ಅಧಿಕಾರಿಗಳದ್ದಾಗಿದೆ.
ಆದರೂ‌ ಕೂಡ ನಿತ್ಯ ಸಾರಿಗೆ ಸಮಸ್ಯೆ ಎದುರಿಸುವ ದೌರ್ಭಾಗ್ಯ
ತಪ್ಪಿಲ್ಲ.

ನಿತಿನ್ ಕುಮಾರ್, ಪದವಿ‌ ವಿದ್ಯಾರ್ಥಿ, ನಗರಗೆರೆ

ಶೈಕ್ಷಣಿಕ ಪರಿಣಾಮ

ಗ್ರಾಮೀಣ ‌ಭಾಗದ
ಬಡ ವಿದ್ಯಾರ್ಥಿಗಳು
ವಿದ್ಯಾಭ್ಯಾಸಕ್ಕಾಗಿ ನಿತ್ಯ‌ ನಗರ ಪ್ರದೇಶಕ್ಕೆ ತೆರಳುವುದು
ಅನಿವಾರ್ಯ.
ಗ್ರಾಮಗಳಿಂದ ಬಸ್‌ ಸೌಲಭ್ಯ ಇಲ್ಲದ ಕಾರಣ ನಿಗದಿತ ಸಮಯಕ್ಕೆ ತೆರಳಲು ಆಗುತ್ತಿಲ್ಲ. ಹೀಗಾಗಿ ಅವರ
ಶೈಕ್ಷಣಿಕ ಬದುಕಿನ‌ ಮೇಲೆ ಪರಿಣಾಮ ಉಂಟಾಗುತ್ತಿದೆ.

ಬಿ.ಪಿ.ಕೃಷ್ಣಮೂರ್ತಿ, ಬಂದಾರ್ಲಹಳ್ಳಿ, ಪೋಷಕರು

ವ್ಯವಸ್ಥೆ ದೊರೆಯಲಿ

ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ‌ ಬಸ್‌ ಏರುವುದೇ ಒಂದು‌ ದೊಡ್ಡ ಸಾಹಸವಾಗಿದೆ. ಈ ನಡುವೆ ಖಾಸಗಿ ಬಸ್‌ಗಳ ಅವೈಜ್ಞಾನಿಕ ಸಂಚಾರದಿಂದ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಸಂಚರಿಸುವ ಪರಿಸ್ಥಿತಿ ಇದೆ. ಕನಿಷ್ಠ ‌ಶಾಲಾ ಕಾಲೇಜು ವಿದ್ಯಾರ್ಥಿಗಳು‌ ಸಂಚರಿಸುವ ಸಮಯದಲ್ಲಿ ಸಮರ್ಪಕವಾಗಿ ಸಾರಿಗೆ ವ್ಯವಸ್ಥೆ ಸಿಗಲಿ.

ಲಕ್ಷ್ಮಿನಾರಾಯಣ್, ನಗರಗೆರೆ, ಪೋಷಕರು

ದೊಡ್ಡ ಸಾಹಸ

ರಾಜ್ಯದ ಗಡಿ‌ಭಾಗದ ಗ್ರಾಮಗಳಿಗೆ ವಿದ್ಯಾರ್ಥಿಗಳು ತೆರಳಬೇಕಾದರೆ‌ ದೊಡ್ಡ ‌ಸಾಹಸವನ್ನೇ ಮಾಡಬೇಕಾಗುತ್ತದೆ. ಅವರಿಗೆ ಅಂತರರಾಜ್ಯ ಬಸ್‌ಗಳಲ್ಲಿ ಅವಕಾಶ ನೀಡುತ್ತಿಲ್ಲ. ರಾಜ್ಯದ ಸಾರಿಗೆ ಬಸ್‌ಗಳಿಗೆ ಅಂತರರಾಜ್ಯ ನಾಮಫಲಕ ಹಾಕುವ ಮೂಲಕ ‌ಪಾಸ್ ಪಡೆದ ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸದಿರುವುದು ಅವೈಜ್ಞಾನಿಕವಾಗಿದೆ

ಕೆ.ಆರ್.ಮನುಜ, ಕುಡುಮಲಕುಂಟೆ, ಪೋಷಕರು

ಬಸ್ ಸೌಲಭ್ಯ ಕಲ್ಪಿಸಲಾಗಿದೆ

ತಾಲ್ಲೂಕಿನ ಬಹುತೇಕ ‌ಭಾಗಗಳಿಗೆ ಅವಶ್ಯಕ್ಕೆ ತಕ್ಕಂತೆ ನಿಗದಿತ ‌ಸಮಯದಲ್ಲಿ ಕೆಎಸ್ ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ‌ಮತ್ತು ನಾಗರಿಕರ ‌ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ಗಳ ನಿಯೋಜನೆ ಸಹ ಮಾಡಲಾಗಿದೆ. ಕೆಲವೊಮ್ಮೆ ತಾಂತ್ರಿಕ ಹಾಗೂ ಸಿಬ್ಬಂದಿ ಸಮಸ್ಯೆಗಳಿಂದ ಪ್ರಯಾಣಿಕರಿಗೆ ತಡವಾಗಬಹುದು. ಉಳಿದಂತೆ ವಿಭಾಗದ ವ್ಯಾಪ್ತಿಯಲ್ಲಿ ಎಲ್ಲ ಬಸ್‌ಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳ ‌ಮನವಿಗೆ ಅನುಗುಣವಾಗಿ ಪರ್ಯಾಯ ಬಸ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಶಿವಪ್ಪ,‌ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT