ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಹೊಸೂರು ಗ್ರಾಮಕ್ಕೆ ಸಂಚರಿಸದ ಬಸ್‌

ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ತವರಿಗಿಲ್ಲ ಸಾರಿಗೆ
Last Updated 15 ಡಿಸೆಂಬರ್ 2021, 4:49 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳ‌ ಜನತೆ ಈ ಭಾಗದಿಂದ ನಿತ್ಯ ಸಂಪರ್ಕ ಹೊಂದಿದ್ದರೂ ಕೂಡ ಕೆಎಸ್‌ಆರ್‌ಟಿಸಿ ಬಸ್ಸುಗಳು ಗ್ರಾಮಕ್ಕೆ ಸಂಚರಿಸದ ಕಾರಣ ನಾಗರಿಕರಿಗೆ ಸಾಕಷ್ಟು ತೊಂದರೆಯಾಗಿದೆ.

ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರ ಜನ್ಮ ಸ್ಥಳವಾದ ಹೊಸೂರು ಗ್ರಾಮ ಅಂಚೆ ಕಚೇರಿ, ಬ್ಯಾಂಕ್ ಸೌಲಭ್ಯ, ನಾಡಕಚೇರಿ, ರೈತ ಸಂಪರ್ಕ‌ ಕೇಂದ್ರ, ಸರ್ಕಾರಿ ಹೆರಿಗೆ ಆಸ್ಪತ್ರೆ, ಪ್ರೌಢಶಾಲೆ, ಪೊಲೀಸ್ ಹೊರ ಠಾಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ. ಈ ಭಾಗದಿಂದ ಸುಮಾರು‌ 15ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಜತೆಗೆ ಇಲ್ಲಿನ ಆರ್ಥಿಕ‌ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಕೇಂದ್ರ ಸ್ಥಾನವಾಗಿದೆ.

ಗೌರಿಬಿದನೂರು ನಗರದಿಂದ ಮಧುಗಿರಿ, ಕೊರಟಗೆರೆ, ತುಮಕೂರು ಸೇರಿದಂತೆ ‌ಇನ್ನಿತರ ಮಾರ್ಗಗಳತ್ತ ಸಾಗುವ ಬಸ್ಸುಗಳು ಗ್ರಾಮಕ್ಕೆ ಆಗಮಿಸದೆ ಕೋಟಾಲದಿನ್ನೆಯ ಮಾರ್ಗವಾಗಿ ನೇರವಾಗಿ ಸಂಚರಿಸುವುದರಿಂದ ನಿತ್ಯ‌ ಸಾವಿರಾರು ಮಂದಿ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಹೊಸೂರಿನಿಂದ ಕೋಟಾಲದಿನ್ನೆಗೆ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ.

ಇದೇ ರೀತಿಯಾಗಿ ಈ ಹಿಂದೆಯೂ ಬಸ್ಸು ಸಂಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಕೋಟಾಲದಿನ್ನೆ ಬಳಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಮಾಡಿದ್ದರು. ಆಗ ಸ್ಥಳಕ್ಕಾಗಮಿಸಿದ್ದ ಅಧಿಕಾರಿಗಳು ಹೊಸೂರಿಗೆ ಬಸ್ಸು ಸೌಲಭ್ಯ ಕಲ್ಪಿಸಿದ್ದರು. ಕೆಲ ದಿನಗಳ ಬಳಿಕ ಸಮಸ್ಯೆ ಮತ್ತೆ ಎದುರಾಗಿದೆ.

ಸ್ಥಳೀಯ ನಿವಾಸಿ ಸಿದ್ದರಾಮಯ್ಯ ಮಾತನಾಡಿ, ‘ಸರ್ಕಾರಿ‌ ಬಸ್ಸು ಸಂಚಾರವಿಲ್ಲದೆ ಸ್ಥಳೀಯರು ಪರಿತಪಿಸುವಂತಾಗಿದೆ. ಅನೇಕ ಬಾರಿ‌ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ‌ಜನಪ್ರತಿನಿಧಿಗಳಿಗೆ ಮನವಿ ನೀಡಿದರು‌ ಕೂಡ ಸೂಕ್ತ ಸ್ಪಂದನೆ ದೊರೆತಿಲ್ಲ’ ಎನ್ನುತ್ತಾರೆ.

ಹೊಸೂರು ನಿವಾಸಿ ವೆಂಕಟೇಶ್ ‌ಮಾತನಾಡಿ, ‘ಗ್ರಾಮಕ್ಕೆ ನಿಗದಿತ ಸಮಯಕ್ಕೆ ಬಸ್ಸುಗಳ‌ ವ್ಯವಸ್ಥೆಯಿಲ್ಲದೆ ಪರಿತಪಿಸುವಂತಾಗಿದೆ. ಇನ್ನು ಸರ್ಕಾರಿ‌ ಬಸ್ಸುಗಳು ನೆಪ ಮಾತ್ರಕ್ಕೆ ಹೊಸೂರಿಗೆ ಟಿಕೆಟ್ ನೀಡಿದರೂ‌ ಕೂಡ ಪ್ರಯಾಣಿಕರನ್ನು ಕೋಟಾಲದಿನ್ನೆಯಲ್ಲೆ ಇಳಿಸುತ್ತಾರೆ. ಇದರ ಬಗ್ಗೆ ಪ್ರಶ್ನಿಸಿದರೆ ಚಾಲಕ ಹಾಗೂ ನಿರ್ವಾಹಕರು ಹಾರಿಕೆ ಉತ್ತರ ನೀಡುತ್ತಾರೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT