ಶನಿವಾರ, ಮೇ 21, 2022
26 °C
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ಭೇಟಿ

ಭೂಕಂಪ ಅಲ್ಲ; ಅನಿಲ ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಮಿಟ್ಟಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಕಂಪನ ಸಂಭವಿಸಿಲ್ಲ. ಅನಿಲ ಸ್ಫೋಟದಿಂದ (ಏರ್‌ಬ್ಲಾಸ್ಟ್‌) ಭೂಮಿಯಲ್ಲಿ ಭಾರಿ ಸದ್ದು ಕೇಳಿ ಬಂದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಎಸ್. ಜಗದೀಶ್ ತಿಳಿಸಿದರು. 

ಮಿಟ್ಟಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳಿಗೆ ಅಧಿಕಾರಿಗಳ ತಂಡ ದೊಂದಿಗೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. 

ಜನರು ಆತಂಕಪಡುವ ಅಗತ್ಯವಿಲ್ಲ. ಕಳೆದ ಮೂರು ದಶಕಗಳಿಂದ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು. ಇತ್ತೀಚೆಗೆ ಈ ಭಾಗದಲ್ಲಿ ವ್ಯಾಪಕ ಮಳೆ ಆಗಿದೆ. ಮಳೆ ನೀರು ಭೂಮಿಯೊಳಗೆ ಪೂರಣವಾಗಿ ಇಂಗುವ ಸಂದರ್ಭದಲ್ಲಿ ಭೂ ಪದರಗಳ ಮಧ್ಯೆ ಇರುವ ಖಾಲಿ ಜಾಗಗಳಿಗೆ ಅಥವಾ ಬಿರುಕುಗಳಿಗೆ ನೀರು ಪ್ರವೇಶಿಸುತ್ತದೆ. ಆ ಸಂದರ್ಭದಲ್ಲಿ ಅಲ್ಲಿದ್ದ ಅನಿಲ ಸ್ಫೋಟವಾಗಿ ಭಾರಿ ಶಬ್ದ ಉಂಟಾಗಿರುವ ಸಾಧ್ಯತೆ ಇದೆ. ಈ ರೀತಿಯ ಶಬ್ದವು ಮುಂದಿನ ದಿನಗಳಲ್ಲೂ ಕಂಡುಬರುವ ಸಾಧ್ಯತೆ ಇದೆ. ಮತ್ತೆ ಈ ರೀತಿಯ ಶಬ್ದ ಉಂಟಾದಲ್ಲಿ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು
ಹೇಳಿದರು.

ರಾಜ್ಯದಲ್ಲಿ ಒಟ್ಟು 14 ಭೂಕಂಪನ ಮಾಪನ ಕೇಂದ್ರಗಳಿವೆ. ಚಿಂತಾಮಣಿ ತಾಲ್ಲೂಕಿನಲ್ಲಿ ಸಂಭವಿಸಿರುವ ‌ಶಬ್ದದ ಹಿನ್ನೆಲೆಯಲ್ಲಿ ಅಂಕಿ–ಅಂಶಗಳನ್ನು ಸಮಗ್ರವಾಗಿ ಪಡೆದು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಭಾಗದಲ್ಲಿ ಯಾವುದೇ ಲಘು ಭೂಕಂಪನ ಸಂಭವಿಸಿರುವ ಕುರಿತು ಯಾವುದೇ ಸಂಕೇತ (ಸಿಗ್ನಲ್)ಗಳು ದಾಖಲಾಗಿಲ್ಲ ಎಂದು ವಿವರಿಸಿದರು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಕಿರಿಯ ವೈಜ್ಞಾನಿಕ ಅಧಿಕಾರಿ ರಮೇಶ್ ದಿಕ್ಪಾಲ್, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಕೃಷ್ಣವೇಣಿ, ಬೋರಪ್ಪ, ತಹಶೀಲ್ದಾರ್ ಹನುಮಂತರಾಯಪ್ಪ, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.