ಶನಿವಾರ, ಡಿಸೆಂಬರ್ 7, 2019
25 °C
ಮುರುಗಮಲೆ ಉರುಸ್‌ನ ಕವ್ವಾಲಿ ಕಛೇರಿ ವೇಳೆ ಗಾಯಕರ ಮೇಲೆ ನೋಟುಗಳನ್ನು ಎರಚಿದ ಜಮಾತ್ ಮುತ್ತುವಲ್ಲಿ ಬಿ.ಎಸ್ ರಫಿವುಲ್ಲಾ

ಗಾಯಕರ ಮೇಲೆ ನೋಟು, ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಮುರುಗಮಲೆಯಲ್ಲಿ ಹಜರತ್ ಅಮ್ಮಾಜಾನ್ ಮತ್ತು ಬಾವಾ ಜಾನ್ ದರ್ಗಾದ ಉರುಸ್ ಅಂಗವಾಗಿ ಸೋಮವಾರ ರಾತ್ರಿ ನಡೆದ ಕವ್ವಾಲಿ ಕಛೇರಿ ವೇಳೆ ಗಾಯಕರ ಮೇಲೆ ಜಮಾತ್ ಮುತ್ತುವಲ್ಲಿ (ಮಸೀದಿಗಳ ನಿರ್ವಹಣಾ ಸಂಘದ ಅಧ್ಯಕ್ಷ) ಬಿ.ಎಸ್ ರಫಿವುಲ್ಲಾ ಅವರು ನೋಟುಗಳನ್ನು ಎರಚಿರುವುದಕ್ಕೆ ಮುಸ್ಲಿಮ ಸಮುದಾಯದಲ್ಲಿಯೇ ಆಕ್ಷೇಪಕ್ಕೆ ಎಡೆ ಮಾಡಿದೆ.

ಜಿಲ್ಲಾ ವಕ್ಫ್ ಸಮಿತಿ ಆಡಳಿತಾಧಿಕಾರಿಯೂ ಆಗಿರುವ ರಫಿವುಲ್ಲಾ ಅವರು ವೇದಿಕೆಯ ಮೇಲೆ ಕವ್ವಾಲಿ ಹಾಡುತ್ತಿರುವ ಗಾಯಕನ ಮೇಲೆ ನೋಟಿನ ಕಟ್ಟು ಹಿಡಿದು ನೋಟುಗಳನ್ನು ಎರಚುತ್ತಿರುವ ವಿಡಿಯೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಯ ವಸ್ತುವಾಗಿದೆ.

ಈ ಕುರಿತು ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡ ಸಾದಿಕ್, ‘ಮುಸ್ಲಿಂ ಸಮುದಾಯದಲ್ಲಿ ಮುತ್ತುವಲ್ಲಿ ಸ್ಥಾನಕ್ಕೆ ಅದರದೇ ಆದ ಘನತೆ ಇದೆ. ಅಂತಹ ಹುದ್ದೆಯಲ್ಲಿದ್ದವರು ವೇದಿಕೆಯಲ್ಲಿ ನೃತ್ಯ ಮಾಡುವುದು, ನೋಟುಗಳನ್ನು ಎರಚಾಡುವುದು ಎಷ್ಟು ಸರಿ? ಅದು ತಪ್ಪು, ಖಂಡನೀಯ’ ಎಂದು ಹೇಳಿದರು.

‘ಮುತ್ತುವಲ್ಲಿ ಸ್ಥಾನದಲ್ಲಿರುವವರು ಜುಬ್ಬಾ, ಫೈಜಾಮಾ ಧರಿಸುವ ಜತೆಗೆ ಧಾರ್ಮಿಕ ಕಟ್ಟಳೆಗಳನ್ನು ಅರಿತು ಘನತೆಯಿಂದ ವರ್ತಿಸಬೇಕು. ಅದಕ್ಕಾಗಿ ಆ ಹುದ್ದೆಗೆ ಹಿರಿಯರು, ಅನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಇಲ್ಲಿ ಚುನಾವಣೆ ನಡೆಯಲು ಬಿಡದೆ, ಲಾಬಿ ಮಾಡುವವರು ಅಂತಹ ಹುದ್ದೆಗಳಲ್ಲಿ ಕುಳಿತು ಸಮುದಾಯದ ಮನಸ್ಸಿಗೆ ನೋವಾಗುವ ರೀತಿ ವರ್ತಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ನೋಟುಗಳನ್ನು ಈ ರೀತಿ ಬಹಿರಂಗವಾಗಿ ತೂರಾಡುವುದು ಎಷ್ಟು ಸರಿ? ಆ ರೀತಿ ಮಾಡುವವರನ್ನು ಪೊಲೀಸರು ಏಕೆ ಬಂಧಿಸಬಾರದು. ತಾಲ್ಲೂಕು ಆಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನಿಸಬೇಕಾಗಿದೆ’ ಎಂದರು.

ಈ ಕುರಿತು ಬಿ.ಎಸ್.ರಫಿವುಲ್ಲಾ ಅವರನ್ನು ಪ್ರಶ್ನಿಸಿದರೆ, ‘ನಾನು ನೋಟುಗಳನ್ನು ಎಸೆದಿಲ್ಲ. ಕವ್ವಾಲಿ ಹಾಡುವ ಗಾಯಕರಿಗೆ ನಮ್ಮಲ್ಲಿ ಕಾಣಿಕೆ ನೀಡುವ ಪರಂಪರೆಯದು. ನನ್ನಂತೆ ಅನೇಕರು ಆ ವೇದಿಕೆಯಲ್ಲಿ ಗಾಯಕರ ಮೇಲೆ ನೋಟು ಹಾಕಿದ್ದಾರೆ. ದರ್ಗಾಗಳಿಗೆ ಮಾನ್ಯತೆ ಕೊಡದ ಪಂಗಡಕ್ಕೆ ಸೇರಿದವರು ಟೀಕೆ ಮಾಡುತ್ತ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು