ಭಾನುವಾರ, ಸೆಪ್ಟೆಂಬರ್ 26, 2021
29 °C
ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಅನುದಾನ ಸಮರ್ಪಕ ಬಳಕೆಗೆತಾಕೀತು

ಪರಿಶಿಷ್ಟರ ಹಣ: ಸದ್ಭಳಕೆಗೆ ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಇಲಾಖೆಗಳಲ್ಲಿ ಮೀಸಲಾಗಿರುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಅನುದಾನವನ್ನು ಸಂಪೂರ್ಣವಾಗಿ ಹಾಗೂ ಸಮರ್ಪಕವಾಗಿ ಬಳಕೆ ಮಾಡಬೇಕು. ಈ ವಿಚಾರವಾಗಿ  ಆಯಾ ಇಲಾಖೆ ಮುಖ್ಯಸ್ಥರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

‌ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ 2021-22ನೇ ಸಾಲಿನ ಎಸ್‌ಸಿಎಸ್‌ಪಿ, ಟಿಎಸ್‌ಪಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಲ್ಲಿ ಬಿಡುಗಡೆ ಮಾಡಿರುವ ಅನುದಾನವನ್ನು ಆಯಾ ಉದ್ದೇಶಗಳಿಗೆ ಮಾತ್ರವೇ ಬಳಕೆ ಮಾಡಬೇಕು. ಈ ಕಾಮಗಾರಿಗಳನ್ನು ನಿಗದಿಪಡಿಸಿದ ಪರಿಶಿಷ್ಟ ಕಾಲೊನಿಗಳಲ್ಲಿ ಮಾತ್ರವೇ ಕೈಗೊಳ್ಳಬೇಕು. ಈ ಅನುದಾನವನ್ನು ಯಾವುದೇ ಕಾರಣಕ್ಕೂ ಬೇರೆ ಸಮುದಾಯ ಅಥವಾ ಕಾಲೊನಿಗಳಿಗೆ ವಿನಿಯೋಗಿಸಬಾರದು ಎಂದು ತಾಕೀತು ಮಾಡಿದರು.

ಸರ್ಕಾರದ ಆದೇಶದಂತೆ ಆ.23 ರಿಂದ 9 ರಿಂದ 12ನೇ ತರಗತಿಗಳು ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಶಾಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಶಾಲೆ ಕೊಠಡಿಗಳು ಸೇರಿದಂತೆ ಹಾಸ್ಟೆಲ್‌ಗಳ ಸ್ವಚ್ಛತೆ ಮಾಡಬೇಕು ಎಂದರು.

ಸಂಭವಿತ ಕೊರೊನಾ ಮೂರನೇ ಅಲೆ ಬರವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಒಂದರಂತೆ ವಸತಿ ಶಾಲೆಗಳನ್ನು ಮೀಸಲಿಟ್ಟು, ಉಳಿದ ಎಲ್ಲ ವಸತಿ ಶಾಲೆ, ಹಾಸ್ಟೆಲ್ ಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ಹೇಳಿದರು.

ಸಾಯಿಶೂರ್ ಪೌಷ್ಟಿಕ ಹಾಲಿನ ಪೌಡರ್ ಅನ್ನು ಅಗತ್ಯವುಳ್ಳ ಎಲ್ಲ ಮಕ್ಕಳಿಗೂ ಸೂಕ್ತ ರೀತಿಯಲ್ಲಿ ವಿತರಿಸಬೇಕು. ಎಷ್ಟು, ಯಾವ ಮಕ್ಕಳಿಗೆ ಯಾವ ಪ್ರಮಾಣದಲ್ಲಿ ಪೌಡರ್ ನೀಡಲಾಗುತ್ತಿದೆ. ಬೇಡಿಕೆ ಎಷ್ಟು, ವಿತರಣೆ ಎಷ್ಟು ಎಂಬುದರ ಕುರಿತ ವರದಿಯನ್ನು ಕಚೇರಿಗೆ ಸಲ್ಲಿಸಬೇಕು. ಶಾಲೆಗಳು ಆರಂಭವಾಗುವುದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಎಲ್ಲ ಮಕ್ಕಳಿಗೂ ಪ್ರಸ್ತುತ ಜಾರಿ ಇರುವಂತೆ ಮನೆಗಳಿಗೆ ಆಹಾರ ಧಾನ್ಯ ವಿತರಣೆಯಾಗಬೇಕು ಎಂದು ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಮಾತನಾಡಿ, 2021-22ನೇ ಸಾಲಿನ ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಒಟ್ಟು 16.10 ಕೋಟಿ ಅನುದಾನ ಗುರಿ ನಿಗದಿಗೊಳಿಸಲಾಗಿದೆ. ಶೇ 30.88ರಷ್ಟು ಆರ್ಥಿಕ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಧನುರೇಣುಕಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಹಾಗೂ ಇತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು