ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನದ ಕೊರತೆ: ಉತ್ಸಾಹ ಕಳೆದುಕೊಂಡ ಎನ್‌ಎಸ್‌ಎಸ್‌ ಘಟಕಗಳು

2018–19ನೇ ಸಾಲಿನಲ್ಲಿ ಬರೀ ₹16 ಸಾವಿರ ಅನುದಾನ ಬಿಡುಗಡೆ, ವಿದ್ಯಾರ್ಥಿಗಳಿಗೆ ಉಪಾಹಾರ ಕೂಡ ಕೊಡಿಸಲು ಹಣವಿಲ್ಲದೆ ಪರದಾಡುವ ಉಪನ್ಯಾಸಕರು
Last Updated 18 ಜನವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್ಎಸ್‌) ಘಟಕಗಳಿಗೆ ಸರಿಯಾಗಿ ಅನುದಾನ ಬಾರದ ಕಾರಣ, ಎನ್ಎಸ್‌ಎಸ್‌ ಚಟುವಟಿಕೆಗಳು ಸೊರಗುತ್ತಿರುವುದು ಶೈಕ್ಷಣಿಕ ವಲಯದಲ್ಲಿ ಬೇಸರ ಮೂಡಿಸಿದೆ.

ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವಲ್ಪ ಭಾಗ ಒಳಗೊಂಡಿರುವ ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 198 ಪದವಿ ಕಾಲೇಜುಗಳಿವೆ. ಈ ಪೈಕಿ ಸುಮಾರು 100 ಎನ್‌ಎಸ್ಎಸ್ ಘಟಕ (ನೂರು ವಿದ್ಯಾರ್ಥಿಗಳ ಒಂದು ತಂಡಕ್ಕೆ ಘಟಕ ಎನ್ನಲಾಗುತ್ತದೆ) ಗಳಿವೆ. ಅವುಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆ ವೇಳೆ ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಹಂಚಿಕೆಯಾದ 60 ಘಟಕಗಳಿಗೆ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿ ವರ್ಷ ಅನುದಾನ ಬಿಡುಗಡೆಯಾಗುತ್ತದೆ.

ಪ್ರತಿ ವರ್ಷ ಎನ್ಎಸ್ಎಸ್‌ ಘಟಕವೊಂದಕ್ಕೆ ವಿಶೇಷ ಶಿಬಿರಕ್ಕಾಗಿ ₹22,500, ಸಾಮಾನ್ಯ ಶಿಬಿರಗಳಿಗಾಗಿ ₹16 ಸಾವಿರ ಅನುದಾನ ನೀಡಲಾಗುತ್ತದೆ. ಜತೆಗೆ ಕಾಲೇಜು ಮಟ್ಟದಲ್ಲಿ ಎನ್‌ಎಸ್‌ಎಸ್‌ ಅಧಿಕಾರಿ ಕೆಲಸ ನಿರ್ವಹಿಸುವ ಉಪನ್ಯಾಸಕರಿಗೆ ತಿಂಗಳಿಗೆ ₹400 ರಂತೆ ವರ್ಷಕ್ಕೆ ₹4,800 ಗೌರವ ಧನ ನೀಡಲಾಗುತ್ತದೆ. ಇದನ್ನೆಲ್ಲ ಲೆಕ್ಕ ಹಾಕಿದರೆ ಒಂದು ಘಟಕಕ್ಕೆ ವಾರ್ಷಿಕ ₹43,300 ಅನುದಾನ ಬಿಡುಗಡೆಯಾಗಬೇಕು. ಆದರೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 2018–19ನೇ ಸಾಲಿನಲ್ಲಿ ಈವರೆಗೆ ಕೇವಲ ಶೇ36.95 ರಷ್ಟು ಅನುದಾನ ಬಿಡುಗಡೆಯಾಗಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ಬಳಿಕ 2018–19ನೇ ಸಾಲಿನ ಅನುದಾನದ ಪೈಕಿ ಈವರೆಗೆ ಬರೀ ₨16 ಸಾವಿರ ಎನ್‌ಎಸ್‌ಎಸ್‌ ಘಟಕಗಳಿಗೆ ತಲುಪಿದೆ. ಇನ್ನೂ ₹27,500 ಅನುದಾನ ಬಾಕಿ ಬರಬೇಕಿದೆ. 2019–20ನೇ ಸಾಲಿನಲ್ಲಿ ಈವರೆಗೆ ಎನ್‌ಎಸ್ಎಸ್‌ ಚಟುವಟಿಕೆಗಾಗಿ ಒಂದೇ ಒಂದು ಪೈಸೆ ಅನುದಾನ ಬಂದಿಲ್ಲ ಎನ್ನುವುದು ಪ್ರಾಂಶುಪಾಲರ ಆರೋಪ.

ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆ ಮತ್ತು ರಾಷ್ಟ್ರಪ್ರೇಮ ಬೆಳೆಸುವಂತಹ ಎನ್‌ಎಸ್ಎಸ್‌ ಚಟುವಟಿಕೆಗಳನ್ನು ನಡೆಸುವ ಉದ್ದೇಶಕ್ಕೆ ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರು, ಪ್ರಾಂಶುಪಾಲರು ಅನುದಾನ ಬಿಡುಗಡೆಯಾಗದಿದ್ದರೂ, ಕಾಲೇಜು ಅಭಿವೃದ್ಧಿ ನಿಧಿ ಮತ್ತು ಪ್ರಾಂಶುಪಾಲರ ಖಾತೆಯಿಂದ ಹಣ ಬಳಸಿಕೊಂಡು ಚಟುವಟಿಕೆಗಳನ್ನು ನಡೆಸಿದ್ದಾರೆ. ಆದರೆ, ಸಕಾಲಕ್ಕೆ ಅನುದಾನ ಬರದ ಕಾರಣ ಅನೇಕ ಉಪನ್ಯಾಸಕರು, ಪ್ರಾಂಶುಪಾಲರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

ಯಾವುದೇ ಎನ್‌ಎಸ್‌ಎಸ್‌ ಚಟುವಟಿಕೆಗಳಿಗೆ ಉಪನ್ಯಾಸಕರು ವಿದ್ಯಾರ್ಥಿಗಳು ಕರೆದುಕೊಂಡು ಹೋದಾಗ ಕನಿಷ್ಠ ಉಪಾಹಾರವನ್ನಾದರೂ ಕೊಡಿಸಬೇಕು. ಅದಕ್ಕಾಗಿ ಉಪನ್ಯಾಸಕರಿಗೆ ₹500 ರಿಂದ ₹1,000 ಖರ್ಚು ಮಾಡಬೇಕಾಗುತ್ತದೆ. ಅತ್ತ ಅನುದಾನವೂ ಇಲ್ಲದ, ಇತ್ತ ಗೌರವಧನವನ್ನೂ ಕಾಣದ ಉಪನ್ಯಾಸಕರು ಹಣಕ್ಕಾಗಿ ಪ್ರಾಂಶುಪಾಲರ ಬಳಿ ಕೈಚಾಚುವ ಸ್ಥಿತಿ ಬಂದಿದೆ. ಈಗಾಗಲೇ ಕಾಲೇಜು ನಿಧಿ, ತಮ್ಮ ಖಾತೆಯಲ್ಲಿನ ಹಣವನ್ನು ಎನ್‌ಎಸ್‌ಎಸ್‌ ಚಟುವಟಿಕೆಗಳಿಗೆ ಬಳಸಿ ಪೇಚಿಗೆ ಸಿಲುಕಿರುವ ಪ್ರಾಂಶುಪಾಲರು ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಎನ್‌ಎಸ್‌ಎಸ್‌ ಬಗ್ಗೆ ಚಕಾರ ಎತ್ತುತ್ತಿಲ್ಲ ಎನ್ನುತ್ತಾರೆ ಉಪನ್ಯಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT