ಭಾನುವಾರ, ಅಕ್ಟೋಬರ್ 20, 2019
21 °C
ಜಿ.ಎಚ್.ನಾಗರಾಜ್ ಅವರ ಮನೆಯಲ್ಲಿ ಎರಡನೇ ದಿನವೂ ಮುಂದುವರಿದ ಐಟಿ ಅಧಿಕಾರಿಗಳ ಪರಿಶೀಲನಾ ಕಾರ್ಯ

ಜಾಲಪ್ಪ ಅಳಿಯನನ್ನು ಕರೆದೊಯ್ದ ಅಧಿಕಾರಿಗಳು

Published:
Updated:

ಚಿಕ್ಕಬಳ್ಳಾಪುರ: ಇಲ್ಲಿನ ಪ್ರಶಾಂತ್ ನಗರದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಸೋದರ ಅಳಿಯ ಜಿ.ಎಚ್.ನಾಗರಾಜ್ ಅವರ ಮನೆಯಲ್ಲಿ ಎರಡನೇ ದಿನವೂ ಪರಿಶೀಲನೆ ಕಾರ್ಯ ಮುಂದುವರಿಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು, ಶುಕ್ರವಾರ ಸಂಜೆ ನಾಗರಾಜ್ ಅವರನ್ನು ತಮ್ಮ ಒಂದು ವಾಹನದಲ್ಲಿ ಕರೆದುಕೊಂಡು ಹೋದರು.

ಮೂರು ವಾಹನಗಳಲ್ಲಿ ಬಂದಿರುವ 9 ಮಂದಿ ಐಟಿ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ 8 ರಿಂದ ನಾಗರಾಜ್ ಅವರ ಮನೆಯಲ್ಲಿ ಬಿಡುಬಿಟ್ಟು ಅವರ ಹಣಕಾಸು ವ್ಯವಹಾರ, ಆಸ್ತಿಗಳು, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಈ ಪೈಕಿ ಆರು ಅಧಿಕಾರಿಗಳು ತಡರಾತ್ರಿ ನಾಗರಾಜ್ ಅವರ ಮನೆಯಿಂದ ತೆರಳಿ ಬೆಳಿಗ್ಗೆ ವಾಪಾಸಾದರು.

ಶುಕ್ರವಾರ ಕೂಡ ದಿನವೀಡಿ ಅಧಿಕಾರಿಗಳು ಮನೆಯಲ್ಲಿಯೇ ಇದ್ದರು. ಸಂಜೆ 5.30ರ ಸುಮಾರಿಗೆ ನಾಗರಾಜ್ ಅವರೊಂದಿಗೆ ಮನೆಯಿಂದ ಹೊರಬಂದ ಕೆಲ ಅಧಿಕಾರಿಗಳು ಅವರನ್ನು ತಮ್ಮ ಒಂದು ಕಾರಿನಲ್ಲಿ ಕೂರಿಸಿಕೊಂಡು ಅಲ್ಲಿಂದ ನಿರ್ಗಮಿಸಿದರು. ಇನ್ನು ಕೆಲ ಅಧಿಕಾರಿಗಳು ಮನೆಯಲ್ಲಿ ಮಾಹಿತಿ ಕಲೆ ಹಾಕುವ ಕಾರ್ಯ ಮುಂದುವರಿಸಿದ್ದಾರೆ. ನಾಗರಾಜ್ ಅವರ ಮನೆಗೆ ಶುಕ್ರವಾರ ಮತ್ತಷ್ಟು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

Post Comments (+)