ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚೆಚ್ಚು ರಕ್ತದಾನ ಶಿಬಿರ ಆಯೋಜಿಸಿ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ 2018–19ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಸಲಹೆ
Last Updated 24 ಜನವರಿ 2020, 14:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಿಸಲು ಪ್ರತಿ ತಾಲ್ಲೂಕಿನಲ್ಲಿ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ವಾರ್ಷಿಕ 12 ಸಾವಿರ ಯೂನಿಟ್ ರಕ್ತ ಸಂಗ್ರಹಿಸಲು ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಶಾಖೆಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ನಗರದಲ್ಲಿ ನಡೆದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ 2018–19ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ರಕ್ತನಿಧಿಯು ಕಡಿಮೆ ಬೆಲೆಯಲ್ಲಿ ರಕ್ತ ಪೂರೈಸುತ್ತಿದ್ದು, ರೋಗಿಗಳ ಪಾಲಿಗೆ ವರವಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳೂ ಈ ರಕ್ತನಿಧಿ ಕೇಂದ್ರದ ಮೇಲೆಯೇ ಅವಲಂಬಿತವಾಗಿವೆ. ಹೀಗಾಗಿ, ರಕ್ತಸಂಗ್ರಹದ ಕೊರತೆ ನೀಗುವ ನಿಟ್ಟಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಸಂಘ ಸಂಸ್ಥೆಗಳ ಜತೆಗೆ ನಿಯಮಿತವಾಗಿ ರಕ್ತ ಸಂಗ್ರಹ ಶಿಬಿರ ಆಯೋಜಿಸಬೇಕು. ಸ್ವಯಂ ಪ್ರೇರಿತ ರಕ್ತದಾನದ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ www.redcrosschikkaballapur.org ಜಾಲತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಫೌಜೀಯಾ ತರುನ್ನುಮ್, ‘ರಕ್ತದಾನ ಶ್ರೇಷ್ಠ ದಾನವಾಗಿದೆ. ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಈಗಾಗಲೇ ಶಾಖೆಯ ರಕ್ತ ಸಂಗ್ರಹದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ ರಕ್ತದ ಬೇಡಿಕೆ ಹೆಚ್ಚಾಗಿರುವ ಕಾರಣ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.

ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಖಜಾಂಚಿ ಎಂ.ಜಯರಾಂ ಮಾತನಾಡಿ, ‘ಈ ಹಿಂದೆ ಜಿಲ್ಲೆಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಇಲ್ಲದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದಾಗ, ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ರಕ್ತ ಬೇಕಾದಾಗಲೆಲ್ಲ ಗಾಯಾಳುಗಳನ್ನು, ಬಾಣಂತಿಯರನ್ನು ಬೆಂಗಳೂರಿಗೆ ರವಾನಿಸಬೇಕಿತ್ತು. ಅದರಿಂದ ಜೀವ ಹಾನಿ ಪ್ರಮಾಣ ಹೆಚ್ಚಾಗಿತ್ತು. ಇದನ್ನು ಮನಗಂಡು ಸಿ.ಕೆ.ನಾರಾಯಣಚಾರ್ಯ ಅವರು ಜಿಲ್ಲೆಯಲ್ಲಿ 2009ರಲ್ಲಿ ಜಿಲ್ಲಾ ಶಾಖೆ ಆರಂಭಿಸಲು ಶ್ರಮಿಸಿದರು’ ಎಂದರು.

‘ನೆರೆಯ ಕೋಲಾರ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಪಾವಗಡ, ಹಿಂದೂಪುರ ಭಾಗಗಳ ಜನರು ತುರ್ತಾಗಿ ರಕ್ತಕ್ಕೆ ನಮ್ಮಲ್ಲಿ ಧಾವಿಸುತ್ತಿರುವ ಕಾರಣ ನಮ್ಮಲ್ಲಿ ರಕ್ತದ ಬೇಡಿಕೆ ಹೆಚ್ಚಾಗಿದೆ. ಅದನ್ನು ನೀಗುವ ನಿಟ್ಟಿನಲ್ಲಿ ನಿಧಿ ಕೇಂದ್ರ ಜಿಲ್ಲೆಯಲ್ಲಿ ಕಾಲೇಜು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ವರ್ಷ 100ಕ್ಕೂ ಅಧಿಕ ಶಿಬಿರಗಳನ್ನು ಏರ್ಪಡಿಸುತ್ತಿದೆ’ ಎಂದರು.

ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರಗಳ ಮಂಡನೆ ಮಾಡಲಾಯಿತು. ಆರ್ಥಿಕ ವರ್ಷದ ಕಾರ್ಯಕ್ರಮಗಳಿಗೆ ಅನುಮೋದನೆ ಪಡೆಯಲಾಯಿತು. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿ 1,020 ಯೂನಿಟ್ ರಕ್ತ ಸಂಗ್ರಹಿಸಿದ ತಹಶೀಲ್ದಾರ್‌ ದಯಾನಂದ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಉಪಾಧ್ಯಕ್ಷ ಡಾ.ಕೆ. ಪಿ. ಶ್ರೀನಿವಾಸಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೆ.ಬಾಬುರೆಡ್ಡಿ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಕಾರ್ಯದರ್ಶಿ ಗುರುರಾಜ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT