ಗುರುವಾರ , ಮಾರ್ಚ್ 30, 2023
24 °C
ಗೌರಿಬಿದನೂರು ತಾಲ್ಲೂಕಿನ 175 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ

ಬಯಲು ಸೀಮೆಯಲ್ಲಿ ಭತ್ತದ ಗದ್ದೆ

ಎ.ಎಸ್. ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಮುಸುಕಿನ ಜೋಳ, ರಾಗಿ, ನೆಲಗಡಲೆ, ರೇಷ್ಮೆ, ತರಕಾರಿ ಕೃಷಿಗೆ ಸೀಮಿತವಾಗಿದ್ದ ತಾಲ್ಲೂಕಿನಲ್ಲಿ ಈ ವರ್ಷ ಭತ್ತದ ಗದ್ದೆಗಳು ತಲೆಎತ್ತಿವೆ.

ಪೂರ್ವ ಮುಂಗಾರಿನಲ್ಲಿ ಸುರಿದ ಉತ್ತಮ ಮಳೆ ಭತ್ತದ ನಾಟಿಗೆ ಪೂರಕವಾಗಿತ್ತು. ಹಾಗಾಗಿ ಪ್ರತಿ ವರ್ಷ ಕೇವಲ 20ರಿಂದ 25 ಹೆಕ್ಟೇರ್‌ಗೆ ಸೀಮಿತವಾಗಿದ್ದ ಭತ್ತ ಈ ವರ್ಷ 175 ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. 

ಪೂರ್ವ ಮುಂಗಾರಿನ ಉತ್ತಮ ಮಳೆಗೆ ಬಹುತೇಕ ಭಾಗಗಳಲ್ಲಿ ಕೆರೆ, ಕುಂಟೆ ಹಾಗೂ ನದಿಯ ನೀರು ಹರಿದು ತಗ್ಗು ಪ್ರದೇಶಗಳು ಜೌಗು ಭೂಮಿಗಳಾಗಿ ಮಾರ್ಪಟ್ಟಿದ್ದವು. ದಶಕಗಳಿಂದ ಬತ್ತಿದ್ದ ಕೊಳವೆ ಮತ್ತು ತೆರೆದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದೆ. ಜೌಗು ಪ್ರದೇಶದಲ್ಲಿ ಜೋಳ, ರಾಗಿ ಬೆಳೆಯಲು ಕಷ್ಟ ಸಾಧ್ಯವಾದ ಕಾರಣ ರೈತರು ಭತ್ತ ಬೆಳೆಗೆ ಆಸಕ್ತಿ ತೋರಿದ್ದಾರೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಭತ್ತದ ಕೃಷಿ ಮಾಡದಂತೆ ಸರ್ಕಾರ ಸೂಚಿಸಿದೆ. ಕೃಷಿ ಇಲಾಖೆಯಿಂದ ಭತ್ತದ ಬಿತ್ತನೆ ಬೀಜವನ್ನು ನೀಡುವುದಿಲ್ಲ. ಆದಾಗ್ಯೂ ಈ ವರ್ಷ ರೈತರು ಭತ್ತದ ಕೃಷಿ ಮೊರೆಹೋಗಿದ್ದಾರೆ.

‘ಕೃಷಿ ಇಲಾಖೆಯು ಭತ್ತದ ನಾಟಿಗೆ ಯಾವುದೇ ಪ್ರೋತ್ಸಾಹ ನೀಡಿಲ್ಲ. ರೈತರೇ ಸ್ವಯಂಪ್ರೇರಿತರಾಗಿ ಭತ್ತದ ಕೃಷಿಯತ್ತ ಆಸಕ್ತರಾಗಿದ್ದಾರೆ. ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಭತ್ತದ ನಿರ್ವಹಣೆ ಬಗ್ಗೆ ರೈತರು ನಿಗಾವಹಿಸಬೇಕು’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಆರ್. ರವಿ.

‘ಪೂರ್ವ ಮುಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ದಶಕಗಳ ಬಳಿಕ ಗದ್ದೆಯಲ್ಲಿ ಭತ್ತ ನಾಟಿಗೆ ಮುಂದಾಗಿದ್ದೇವೆ. ವರುಣ ಕೃಪೆ ತೋರಿದರೆ ಉತ್ತಮ ಫಸಲು ನಿರೀಕ್ಷಿಸಬಹುದು’ ಎನ್ನುವುದು ರೈತ ಹನುಮಂತಪ್ಪ ಅಭಿಪ್ರಾಯ.

 ದುಪ್ಪಟ್ಟು ಕೂಲಿ ನೀಡಿ ನಾಟಿ
ಸರ್ಕಾರದಿಂದ ಬಿಪಿಎಲ್‌ ಕುಟುಂಬಗಳಿಗೆ ಪಡಿತರ ವಿತರಣಾ ಕೇಂದ್ರಗಳಲ್ಲಿ ಅಕ್ಕಿ ನೀಡಲಾಗುತ್ತಿದೆ. ಆದರೂ ದುಪ್ಪಟ್ಟು ಕೂಲಿ ನೀಡಿ ರೈತರು ತಮ್ಮ ಜಮೀನಿನಲ್ಲಿ ಭತ್ತ ನಾಟಿ ಮಾಡುತ್ತಿದ್ದಾರೆ. ದಶಕಗಳ ಬಳಿಕ ತಾಲ್ಲೂಕಿನ ರೈತರಿಗೆ ಭತ್ತದ ಕೃಷಿಯತ್ತ ಒಲವು ಮೂಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.