ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು

Last Updated 26 ನವೆಂಬರ್ 2021, 2:05 IST
ಅಕ್ಷರ ಗಾತ್ರ

ಸಾದಲಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸತತವಾಗಿ ಸುರಿದ ಮಳೆಯಿಂದ ರೈತರಿಗೆ ಭಾರಿ ನಷ್ಟವಾಗಿದೆ. ಮಳೆಯು ಅನ್ನದಾತರ ನೆಮ್ಮದಿಯ ಬದುಕನ್ನು ಕಸಿದುಕೊಂಡಿದೆ.

ಸಾದಲಿ ಹೋಬಳಿಯ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಯ ಗಾಂಡ್ಲಚಿಂತೆ ಗ್ರಾಮದ ಚಿಕ್ಕವೆಂಕಟಪ್ಪ ಅವರ ಮೂರು ಎಕರೆ ಸೇರಿದಂತೆ ಗ್ರಾಮದಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲು ಮಳೆಯ ಪ್ರವಾಹಕ್ಕೆ ಸಿಲುಕಿ
ನೆಲಕಚ್ಚಿದೆ.

ಕಟಾವಿಗೆ ಸಿದ್ಧವಾಗಿದ್ದ ರೈತರಿಗೆ ಮಹಾಮಳೆ ಬರಸಿಡಿಲಿನಂತೆ ಬಂದೆರಗಿದೆ. ಕಟಾವಿಗೆ ಬಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಪ್ರವಾಹದ ನೀರಿನಲ್ಲಿ ತೇಲಿ ಬಂದ ಮರದ ದಿಮ್ಮಿಗಳು, ಕಸ, ಕಡ್ಡಿಗಳು ಕೃಷಿ ಭೂಮಿ ಸೇರಿಕೊಂಡು ಬೆಳೆಯನ್ನು ಹಾಳು ಮಾಡಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ
ರೈತರದ್ದಾಗಿದೆ.

ಸಾದಲಿಯ ಹಲವಾರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮತ್ತು ಜೋಳದ ಬೆಳೆ ನಾಶವಾಗಿದೆ. ಆಕಾಶ ನೋಡುತ್ತಿದ್ದ ಭತ್ತದ ತೆನೆಗಳು ಪ್ರವಾಹದ ತೀವ್ರತೆಗೆ ನೆಲಕಚ್ಚಿದ್ದು ನೋಡ ನೋಡುತ್ತಲೇ ಬೆಳೆದ ಫಸಲು ನೀರು ಪಾಲಾಗಿದೆ. ಇದರಿಂದ ಚೇತರಿಕೆ ಕಾಣುವ ಮೊದಲೇ ಮತ್ತೆ ಮಳೆ ಅವಾಂತರ ಸೃಷ್ಟಿಸಿದೆ.

ಭಾರಿ ಮಳೆಗೆ ಇಲ್ಲಿನ ರೈತರು ಬೆಳೆ ಹಾನಿಯ ಜೊತೆಗೆ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈಗ ಮತ್ತೊಮ್ಮೆ ಮಳೆ ರೈತರ ಬಾಳಲ್ಲಿ ಚೆಲ್ಲಾಟ ಆಡುತ್ತಿದೆ. ಭತ್ತದ ಸಸಿ ತೆನೆ ಬಂದು ಕಟಾವು ಮಾಡುವ ಕಾರ್ಯದ ಸರಿ ಹೊತ್ತಿನಲ್ಲಿ ಸುರಿದ ಮಳೆಗೆ ಪೈರುಗಳು ಕೊಚ್ಚಿ ಹೋಗಿವೆ.

ನಿರಂತರ ಮಳೆಯಿಂದ ನೂರಾರು ರೈತರ ಟೊಮೆಟೊ ಬೆಳೆಯೂ ನಾಶವಾಗಿದೆ. ರೈತರಿಗೆ ಒಂದರ ಮೇಲೆ ಒಂದರಂತೆ ಆಘಾತ ಎದುರಾಗಿದ್ದು, ದಿಕ್ಕು ತೋಚದಂತೆ ಆಗಿದೆ.

ಸ್ಥಳಕ್ಕೆ ಸಾದಲಿ ನಾಡ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT