ಮಂಗಳವಾರ, ಜೂನ್ 22, 2021
28 °C

ತೋಟದಲ್ಲಿ ಕೆಂಪು ಮಚ್ಚೆಯ ಕಪ್ಪೆ ಪತ್ತೆ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕಪ್ಪೆಗಳ ಕೂಗು ಕೇಳಿಸಿತೆಂದರೆ ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಜನಪದರಲ್ಲಿದೆ. ಕೆಲವಾರು ವಿಧದ ಕಪ್ಪೆಗಳು ಬೇಸಿಗೆಯ ಬಿಸಿಗೆ ಭೂಮಿಯಲ್ಲಿನ ತೇವದ ಪ್ರದೇಶಗಳನ್ನು ಆಶ್ರಯಿಸಿ ಸುಖ ನಿದ್ರೆಯಲ್ಲಿರುತ್ತವೆ. ಮುಂಗಾರು ಮಳೆಯ ಹನಿಗಳು ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ನಿದ್ದೆಯಿಂದೆದ್ದು ಹೊರಬರುವ ಕಪ್ಪೆಗಳು ವಟಗುಟ್ಟತೊಡಗುತ್ತವೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಬಿದ್ದ ಮಳೆ ಇಳೆಯನ್ನು ತಂಪಾಗಿಸಿದಂತೆಯೇ ತಾಲ್ಲೂಕಿನ ಕೊತ್ತನೂರಿನ ತೋಟವೊಂದರ ಒಣಗಿ ಬಿದ್ದುಹೋದ ತೆಂಗಿನ ಮರದ ಕಾಂಡದೊಳಗೆ ಅಪರೂಪದ ಕಪ್ಪೆಯೊಂದು ಕಾಣಿಸಿದೆ.

ಕಡು ಕಂದು ಬಣ್ಣದ ದೇಹದ ಮೇಲೆ ಕೆಂಬಣ್ಣದ ಮಚ್ಚೆಯಿದೆ. ನೀರಿನ ಸೆಲೆಗಳಿಗಿಂದ ಒಣ ಎಲೆ, ತೆಂಗಿನ ಪೊಟರೆಯೊಳಗೆ ವಾಸಿಸುವ ಈ ಕಪ್ಪೆಯನ್ನು ಇಂಗ್ಲಿಷ್‌ನಲ್ಲಿ ಪೇಯಿಂಟೆಡ್ ಬೆಲೂನ್ ಫ್ರಾಗ್, ಶ್ರೀಲಂಕನ್ ಬುಲ್ ಫ್ರಾಗ್ ಎಂದು ಕರೆಯುತ್ತಾರೆ. ಮಳೆಗಾಲದ ಪ್ರಾರಂಭದಲ್ಲಿ ಗಂಡು ಕಪ್ಪೆ ಹೆಣ್ಣು ಕಪ್ಪೆಯನ್ನು ತನ್ನ ವಿಶಿಷ್ಟ ದನಿಯಿಂದ ಕೂಗಿ ಕರೆಯುತ್ತದೆ. ಇರುವೆಗಳು ಸೇರಿದಂತೆ ಹಲವಾರು ಸಣ್ಣಪುಟ್ಟ ಕೀಟಗಳನ್ನು ಈ ಕಪ್ಪೆ ತಿನ್ನುತ್ತದೆ.

‘ಸಾಮಾನ್ಯವಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ವೈವಿಧ್ಯಮಯವಾದ ಕಪ್ಪೆಗಳು ಕಂಡುಬರುತ್ತವೆ. ಆದರೆ ಬಯಲು ಸೀಮೆಯಾದ ನಮ್ಮಲ್ಲಿ ವೈವಿಧ್ಯತೆ ಕಡಿಮೆ. ಒಣ ತೆಂಗಿನ ಮರದ ಪೊಟರೆಗಳು ಹಕ್ಕಿಗಳ ವಾಸಕ್ಕೆ ಅನುಕೂಲವೆಂದು ತಿಳಿದಿತ್ತು. ಇದೀಗ ಅದು ಕಪ್ಪೆಗಳ ಆವಾಸಸ್ಥಾನವೂ ಆಗಿದೆಯೆಂದು ತಿಳಿಯಿತು. ಮುರಿದಿದ್ದ ತೆಂಗಿನ ಕಾಂಡವನ್ನು ಕತ್ತರಿಸಲು ಹೋದಾಗ ಈ ವಿಶೇಷವಾದ ಕಪ್ಪೆ ಕಾಣಿಸಿತು. ಅದರಿಂದ ಮರವನ್ನು ಹಾಗೆಯೇ ಬಿಟ್ಟೆ’ ಎಂದು ಕೊತ್ತನೂರಿನ ಸ್ನೇಕ್ ನಾಗರಾಜ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು