ಬಾಗೇಪಲ್ಲಿ: ಉಕ್ಕಿದ ಚಿತ್ರಾವತಿ ವೀಕ್ಷಣೆಗೆ ಜನ

ಬಾಗೇಪಲ್ಲಿ: ಚಿಕ್ಕಬಳ್ಳಾಪುರ, ಗುಡಿಬಂಡೆ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಬಿದ್ದ ಭಾರಿ ಮಳೆಗೆ ಕೆರೆ ಕಟ್ಟೆಗಳಲ್ಲಿ ನೀರು ತುಂಬಿದೆ. ಪರಗೋಡು ಚಿತ್ರಾವತಿ ಅಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ.
ಪಟ್ಟಣಕ್ಕೆ ಸಂಪರ್ಕಿಸುವ 2 ಚಿತ್ರಾವತಿಯ ಮೇಲುಸೇತುವೆಗಳ ಮೇಲೆ ನೀರು ರಭಸವಾಗಿ ಹರಿದಿದ್ದು, ಜನರ ಹಾಗೂ ವಾಹನಗಳ ಸಂಪರ್ಕ ಕಡಿತವಾಗಿದೆ. ಸೇತುವೆಗಳ ಇಕ್ಕೆಲಗಳಲ್ಲಿ ಒತ್ತುವರಿ ಆಗಿರುವ ಸ್ಥಳಗಳಿಗೆ ನೀರು ನುಗ್ಗಿದೆ. ಇದೆಂದೂ ಕಂಡರಿಯದ ರೀತಿಯಲ್ಲಿ ಮೊದಲ ಬಾರಿಗೆ ಮೇಲುಸೇತುವೆಗಳ ಮೇಲೆ ಹರಿಯುವ ಜಲಧಾರೆಯನ್ನು ವೀಕ್ಷಣೆ ಮಾಡಲು ಸಾವಿರಾರು ಜನರು ಜಮಾಯಿಸಿದ್ದಾರೆ.
ವರದಯ್ಯಗಾರಿಪಲ್ಲಿ-ಭೋಗೇಪಲ್ಲಿ ಮಧ್ಯೆ ಹರಿಯುವ ಚಿತ್ರಾವತಿ ಸೇತುವೆ ಒಡೆದಿದೆ. ಇದರಿಂದ ಪರಗೋಡು ಬಳಿಯ ಚಿತ್ರಾವತಿ ಅಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ.
ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ನೀರಿನ ರಭಸ ಹೆಚ್ಚಾಗಿದೆ. ಇದರಿಂದ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಪಟ್ಟಣದ ಸಿವಿಲ್ ನ್ಯಾಯಾಲಯದ ಪಕ್ಕದಲ್ಲಿ ಇರುವ ಚಿತ್ರಾವತಿ ಮೇಲುಸೇತುವೆಗಳ ಮೇಲೆ ನೀರು ಹರಿದಿದೆ. ಪಟ್ಟಣದ ಸಿವಿಲ್ ನ್ಯಾಯಾಲಯದ ಪಕ್ಕದಲ್ಲಿ ಸೇತುವೆಯಲ್ಲಿ ನೀರು ಸುಂದರಯ್ಯ ಭವನ, ನರಹರಿ ಕಾಂಪ್ಲೆಕ್ಸ್, ಕೆನೆರಾ ಬ್ಯಾಂಕ್, ಸಿವಿಲ್ ನ್ಯಾಯಾಲಯದ ಒಳಕ್ಕೆ ನೀರು ನುಗ್ಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಡಿ.ಎ.ದಿವಾಕರ್, ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಆರ್.ನಾಗರಾಜ್, ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕಾರ್ಯಪಾಲಕ ಎಂಜಿನಿಯರ್ ಕೆ.ಎಸ್.ರಾಮಲಿಂಗಾರೆಡ್ಡಿ ಸ್ಥಳ ವೀಕ್ಷಣೆ ಮಾಡಿದರು. ಪುರಸಭಾ ಮುಖ್ಯಾಧಿಕಾರಿ ಎ.ಮಧುಕರ್ ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿದರು. ನೀರು ಮುಖ್ಯರಸ್ತೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಪೊಲೀಸರು, ಗೃಹರಕ್ಷಕ ದಳದವರು ಬ್ಯಾರಿಕೇಡ್ ಹಾಕಿ ಜನರ ಹಾಗೂ ವಾಹನ
ಸಂಚಾರ ತಡೆದರು.
ಪಟ್ಟಣದ ಸಂತೇಮೈದಾನ ರಸ್ತೆ ಹಾಗೂ ಟಿ.ಬಿ.ಕ್ರಾಸ್‌ನಿಂದ-ಪಟ್ಟಣಕ್ಕೆ ಸಂಪರ್ಕಿಸುವ 2 ಮುಖ್ಯರಸ್ತೆಗಳಲ್ಲಿ ಸಂಚಾರ ಕಡಿತ ಆಯಿತು. ಕೆಎಸ್‌ಆರ್‌ಟಿಸಿ, ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಿದ್ದರಿಂದ ಪಟ್ಟಣದಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು, ಆಂಧ್ರಪ್ರದೇಶದ ಕಡೆಗೆ ಸಂಚರಿಸುವ ಮಾರ್ಗದ ಪ್ರಯಾಣಿಕರು ಪಟ್ಟಣದಲ್ಲಿ ಉಳಿದರು. ಗಾರ್ಮೆಂಟ್ಸ್‌ಗೆ ತೆರಳುವ ಕಾರ್ಮಿಕರು ಮನೆಗೆ ವಾಪಸ್ ಆದರು.
ಚಿತ್ರಾವತಿಯ ಮೇಲುಸೇತುವೆಗಳ ಮೇಲೆ ಹರಿಯುವ ನೀರನ್ನು ಕಣ್ತುಂಬಿಕೊಳ್ಳಲು ಬೆಳಿಗ್ಗೆ 6 ಗಂಟೆಯಿಂದಲೇ ಜನರು ಜಮಾಯಿಸಿದರು. ಬ್ಯಾರಿಕೇಡ್‌ಗಳ ಹಿಂದೆ ನಿಂತು ನೀರನ್ನು ವೀಕ್ಷಣೆ ಮಾಡಿ ಸಂಭ್ರಮಿಸಿದರು. ಕಿಕ್ಕಿರಿದ ಜನರನ್ನು ಚದುರಿಸಲು ಪೊಲೀಸರು ಲಾಠಿ ಹಿಡಿದು ಚದುರಿಸಿದರು. ಮಧ್ಯಾಹ್ನದ 2 ಗಂಟೆಯ ವೇಳೆಗೆ ನೀರಿನ ಒಳಹರಿವು ಕಡಿಮೆ ಆಯಿತು.
ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ವೆಂಕಟೇಶ್ ಮತ್ತು ಶಿವಗಾಮಿ ದಂಪತಿ ಗುಡಿಸಲು ಮನೆಯ ಗೋಡೆ ಕುಸಿತವಾಗಿದೆ. ಕೊಂಡಂವಾರಿಪಲ್ಲಿ, ಲಘುಮದ್ದೇಪಲ್ಲಿ ಸೇರಿದಂತೆ ಕೆಲ ಕಡೆಯ ಗ್ರಾಮಗಳಲ್ಲಿನ ಗುಡಿಸಲು, ಚಾವಡಿಗಳು ನೆಲ ಕಚ್ಚಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.