ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಿಗೆ ವೇಳೆ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ

Last Updated 24 ಅಕ್ಟೋಬರ್ 2021, 4:32 IST
ಅಕ್ಷರ ಗಾತ್ರ

ಚಿಂತಾಮಣಿ: ಹೆರಿಗೆ ಮಾಡಿಸುವಾಗ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಸಂಬಂಧಿಕರು ಶನಿವಾರ ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಸಿಂಗಸಂದ್ರ ಗ್ರಾಮದ ಕೃಷ್ಣಾರೆಡ್ಡಿ ಎಂಬುವರ ಪತ್ನಿ ಶಿಲ್ಪಾ ಶನಿವಾರ ಬೆಳಿಗ್ಗೆ 7.30 ಗಂಟೆಯಲ್ಲಿ ಹೆರಿಗೆ ನೋವಿನ ಹಿನ್ನೆಲೆಯಲ್ಲಿ ವೈದ್ಯೆ ಡಾ.ಜಯಂತಿ ಅವರ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯೆ ಸಿಜೇರಿಯನ್ ಮಾಡಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ನಡೆಯಿರಿ. ಅಲ್ಲೇ ಬಂದು ಹೆರಿಗೆ ಮಾಡಿಸುವುದಾಗಿ ತಿಳಿಸಿದರು. 12 ಗಂಟೆಯಾದರೂ ಅವರು ಬರಲಿಲ್ಲ. ಇತರೇ ವೈದ್ಯರು ಪರೀಕ್ಷೆ ಮಾಡಲಿಲ್ಲ. ತಡವಾಗಿದ್ದರಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದರು.

‘ಗರ್ಭಿಣಿಯ ನಾಡಿಯನ್ನು ಪರೀಕ್ಷಿಸಲಾಯಿತು. ಮಗುವಿನ ನಾಡಿಯೇ ಅಥವಾ ತಾಯಿ ನಾಡಿನಾ ಎನ್ನುವ ಸಂದೇಹದಿಂದ ಸ್ಕ್ಯಾನ್ ಮಾಡಿಸಲಾಯಿತು. ಸ್ವತಃ ನಾನೇ ರೇಡಿಯಾಲಜಿ ವಿಭಾಗಕ್ಕೆ ತೆರಳಿ ಸ್ಕ್ಯಾನ್ ಮಾಡಿಸಿದೆ. ಅದರಲ್ಲಿ ಮಗು ಮೃತಪಟ್ಟಿರುವುದು ಗೊತ್ತಾಯಿತು’ ಎಂದು ಡಾ.ಜಯಂತಿ ತಿಳಿಸಿದರು.

‘ಮಗು ಮೃತಪಟ್ಟು 24ರಿಂದ 48 ಗಂಟೆಗಳಾಗಿರಬಹುದು. ಈ ವಿಷಯವನ್ನು ತಾಯಿ ಮತ್ತು ಸಂಬಂಧಿಕರಿಗೆ ತಿಳಿಸಿ ಸಿಜೇರಿಯನ್ ಮಾಡುವುದರಿಂದ ಪ್ರಯೋಜನವಿಲ್ಲ. ಸಹಜ ಹೆರಿಗೆ ಮಾಡಿಸುವುದಾಗಿ ಮನವರಿಕೆ ಮಾಡಿಕೊಟ್ಟು ಹೆರಿಗೆ ಮಾಡಿಸಿದ್ದೇನೆ. ತಡವಾಗಿದ್ದರೆ ತಾಯಿಯ ಜೀವಕ್ಕೂ ಅಪಾಯವಿತ್ತು. ಮಗು ಇಲ್ಲಿಗೆ ಬರುವ ಮುಂಚೆಯೇ ಮೃತಪಟ್ಟಿತ್ತು’ ಎಂದು
ಸ್ಪಷ್ಟಪಡಿಸಿದರು.

ಕೆಲವು ಬಾರಿ ಇಂತಹ ಪ್ರಕರಣಗಳು ನಡೆಯುತ್ತವೆ. ಅಂತಿಮ ಹಂತದಲ್ಲಿ ನಾಡಿ ಪರೀಕ್ಷೆ ಮಾಡಿದಾಗ ಮಗುವಿನದಾ ಅಥವಾ ತಾಯಿಯದಾ ಎನ್ನುವುದು ಖಚಿತವಾಗಿ ಗುರುತಿಸಲಾಗುವುದಿಲ್ಲ. ಈ ಅನುಮಾನದಿಂದಲೇ ಸ್ಕ್ಯಾನ್ ಮಾಡಿಸಲಾಯಿತು. ಆಗ ಮಗು ಮೃತಪಟ್ಟಿರುವುದು ತಿಳಿದು ಬಂತು. ಮಗುವಿನ ಕರುಳುಬಳ್ಳಿ ಕಪ್ಪುಬಣ್ಣಕ್ಕೆ ಬಂದಿದೆ. ಈಗ ತಾನೆ ಮೃತಪಟ್ಟಿದ್ದರೆ ಕರುಳಬಳ್ಳಿ ಮಾಮೂಲಿಯಾಗಿರುತ್ತದೆ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಡಲಾಯಿತು.

ತಹಶೀಲ್ದಾರ್ ಹನುಮಂತರಾಯಪ್ಪ, ಆಡಳಿತ ವೈದ್ಯಾಧಿಕಾರಿ ಸಂತೋಷ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಿದರು.

ದೂರಿನ ಮನವಿಯನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ತನಿಖೆ ಮಾಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT