ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳತ್ತ ಪೋಷಕರ ಚಿತ್ತ

ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೊರೆದ 2,673 ವಿದ್ಯಾರ್ಥಿಗಳು: ‘ವಿದ್ಯಾಗಮ’ಕ್ಕೆ ಮನಸೋತ ಪಾಲಕರು
Last Updated 27 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅನುದಾನ ರಹಿತ ಶಾಲೆಗಳಲ್ಲಿನ ಆರ್‌ಟಿಇ ಸೀಟ್‌ ರದ್ದತಿ ಹಾಗೂ ಲಾಕ್‌ಡೌನ್‌ ಸೃಷ್ಟಿಸಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಂತರ ಅನೇಕ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.

ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ 2,673 ಮಕ್ಕಳು 2020–21ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಸೇರುವ ಮೂಲಕ ‘ದಾಖಲಾತಿ’ಯಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಪೋಷಕರು ಇಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳತ್ತ ಒಲವು ತೋರಿರುವುದು ಇದೇ ಮೊದಲು ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು.

ಪ್ರತಿವರ್ಷ ನಾನಾ ಕಾರಣಗಳಿಂದ ಸುಮಾರು 250 ರಿಂದ 300 ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದರು. ಆದರೆ, ಈ ಬಾರಿ ಎರಡೂವರೆ ಸಾವಿರಕ್ಕೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ಪ್ರವೇಶಾತಿ ಪಡೆದಿರುವುದು ಶಿಕ್ಷಣಾಧಿಕಾರಿ ಮತ್ತು ಶಿಕ್ಷಕರ ಸಂತಸವನ್ನು ಹೆಚ್ಚಿಸಿದೆ.

ಮನಗೆದ್ದ ‘ವಿದ್ಯಾಗಮ’: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ, ಸೌಲಭ್ಯಗಳ ಕೊರತೆ ಇರುತ್ತದೆ ಎಂಬ ದೂರುಗಳನ್ನು ಹೇಳುತ್ತಾ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದ ಪೋಷಕರ ಮನಸ್ಥಿತಿಯಲ್ಲೂ ಈಗ ಬದಲಾವಣೆ ಕಂಡು ಬರುತ್ತಿದೆ.

ಖಾಸಗಿ ಶಾಲೆಗಳ ಸ್ಥಿತಿ ಅನಿಶ್ಚಿತತೆಯಿಂದ ಕೂಡಿರುವ ಹೊತ್ತಿನಲ್ಲಿಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂದು ಶಿಕ್ಷಣ ಇಲಾಖೆ ‘ವಿದ್ಯಾಗಮ’ ಕಾರ್ಯಕ್ರಮವನ್ನು ಜಾರಿಗೊಳಿಸಿತು. ಇದರಿಂದ ಮಕ್ಕಳ ಮನೆಯಂಗಳಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಿದರು. ಇದು ಬಹಳಷ್ಟು ಪೋಷಕರು ಮತ್ತು ಮಕ್ಕಳ ಮನಸ್ಸನ್ನು ಗೆದ್ದಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು: ಚಿಕ್ಕಬಳ್ಳಾಪುರ (743), ಗೌರಿಬಿದನೂರು (678), ಚಿಂತಾಮಣಿ (482), ಬಾಗೇಪಲ್ಲಿ (380), ಶಿಡ್ಲಘಟ್ಟ (326), ಗುಡಿಬಂಡೆ (64) ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ.

ಖಾಸಗಿ ಶಾಲೆಗಳ ಮೇಲೆ ಒಲವಿದ್ದರೂ ಹಲವು ಕಾರಣಗಳಿಂದ ಪಾಲಕರು ನಿರ್ಧಾರ ಬದಲಿಸಿದ್ದಾರೆ. ಶಾಲೆಗಳು ಇನ್ನೂ ಆರಂಭಗೊಂಡಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಹಲವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ದುಬಾರಿ ಶುಲ್ಕ ಪಾವತಿಸಿ ಮಕ್ಕಳನ್ನು ಓದಿಸುವುದು ಹೊರೆಯಾಗಿದೆ.

ಅಲ್ಲದೇ, ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯವಾದ ಮೊಬೈಲ್‌ ಇಲ್ಲದಿರುವುದು, ಹಳ್ಳಿಗಳಲ್ಲಿ ಇಂಟರ್‌ನೆಟ್‌, ನೆಟ್‌ವರ್ಕ್ ಸಮಸ್ಯೆ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಕರೆ ತರುತ್ತಿವೆ.

ಜತೆಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಮನೆ ಬಾಗಿಲಿಗೆ ಬಂದು ಪಾಠ ಮಾಡುತ್ತಿದ್ದಾರೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಕ್ಕಳು ದೂರದ ಖಾಸಗಿ ಶಾಲೆಗಳಲ್ಲಿ ಓದುವ ಬದಲು ಹತ್ತಿರದ ಶಾಲೆಗಳಲ್ಲಿ ಓದಲಿ ಎಂಬುದು ಪೋಷಕರ ನಿಲುವಾಗಿದೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆ ಪೋಷಕರಿಗೆ ಸೂಚಿಸುತ್ತಿವೆ. ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆಗೆ ಸೇರಿಸಿದರೂ ಈ ವರ್ಷ ತರಗತಿ ನಡೆಯುವುದೇ ಅನುಮಾನ ಎಂಬ ಸ್ಥಿತಿ ಇರುವುದರಿಂದ ಹಲವರು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.

‘ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಸಂಕಷ್ಟ, ದೂರದ ಶಾಲೆಗಳಿಗೆ ಪ್ರಯಾಣ ಮಾಡಲು ಸೋಂಕಿನ ಭಯ, ಖಾಸಗಿ ಶಾಲೆಗಳಲ್ಲಿರುವ ದುಬಾರಿ ಶುಲ್ಕ, ಡೊನೇಷನ್‌ ಹಾವಳಿ ಮುಂತಾದ ಅಂಶಗಳು ಕೂಡ ಬಡ ಮತ್ತು ಮಧ್ಯಮ ವರ್ಗದ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಕಾರಣವಾಗಿವೆ’ ಎಂದು ಶಿಕ್ಷಕ ಕೃಷ್ಣಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT