ಗುರುವಾರ , ನವೆಂಬರ್ 21, 2019
24 °C
‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಬಾಗೇಪಲ್ಲಿಯಲ್ಲಿ ‘ಸಿಟಿಜನ್ಸ್ ಫಾರ್ ಚೇಂಜ್’, ಸದುಪಯೋಗಕ್ಕೆ ಸಿಇಒ ಬಿ.ಫೌಜಿಯಾ ತರನ್ನುಮ್ ಮನವಿ

ಅ.23 ರಂದು ‘ಜನಸ್ಪಂದನ’ದಲ್ಲಿ ಭಾಗವಹಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಬಾಗೇಪಲ್ಲಿ ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿ ದರ್ಗಾ ಸರ್ಕಲ್ ಬಳಿಯ ಹೊಸ ಶಾದಿ ಮಹಲ್‌ನಲ್ಲಿ ಅ.23 (ಬುಧವಾರ) ರಂದು ‘ಜನಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ಷೇತ್ರದ ನಾಗರಿಕರು ಈ ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

‘ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯ ಬಾಗೇಪಲ್ಲಿ ಕಸಬಾ, ಗೂಳೂರು, ಮಿಟ್ಟೆಮರಿ, ಪಾತಪಾಳ್ಯ, ಚೇಳೂರು, ಗುಡಿಬಂಡೆ ಕಸಬಾ, ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ‘ಸಿಟಿಜನ್ಸ್ ಫಾರ್ ಚೇಂಜ್’ ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದರು.

‘ಕಾರ್ಯಕ್ರಮದಲ್ಲಿ ಶಾಸಕರಾದ ಎಸ್‌.ಎನ್.ಸುಬ್ಬಾರೆಡ್ಡಿ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ‘ಜನಸ್ಪಂದನ’ದಲ್ಲಿ ಭಾಗವಹಿಸಿ ಕಾರ್ಯಕ್ರಮ ಪ್ರಯೋಜನಪಡೆದುಕೊಳ್ಳಬೇಕು’ ಎಂದರು.

‘ರಾಜ್ಯ ರಸ್ತೆ ಸಾರಿಗೆ ಅವ್ಯವಸ್ಥೆ, ರಸ್ತೆ ಗುಂಡಿಗಳು, ಕುಡಿಯುವ ನೀರು, ಕಸ ವಿಲೇವಾರಿ, ಟ್ರಾಫಿಕ್ ಸಮಸ್ಯೆ, ಕೆರೆಗಳ ಅಭಿವೃದ್ಧಿ, ಬಿಡಾಡಿ ದನ, ನಾಯಿಗಳ ಕಾಟ, ಸರಗಳ್ಳತನ, ಸ್ಥಳೀಯರಿಗೆ ಟೋಲ್‌ ಸುಂಕ ವಸೂಲಿ, ಕೆರೆಗಳ ಅಭಿವೃದ್ಧಿ, ಸರ್ಕಾರಿ ಭೂಮಿ ಮತ್ತು ರಾಜಕಾಲುವೆಗಳ ಒತ್ತುವರಿ, ವಸತಿ, ನಿವೇಶನ, ಇತಿಹಾಸ ಸ್ಮಾರಕಗಳ ರಕ್ಷಣೆ ಇಂತಹ ಸಮಸ್ಯೆಗಳಿಗೆ ನೇರವಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿ, ಪರಿಹಾರ ಪಡೆಯಬಹುದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)