ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಬಳ್ಳಿಯಲ್ಲಿ ಜೋಲುಬಿದ್ದ ಫ್ಯಾಶನ್ ಫ್ರೂಟ್

ಹಣ್ಣುಗಳು ಆರೋಗ್ಯವರ್ಧಕ ಎಂದೇ ಪ್ರಸಿದ್ಧ, ಬ್ರೆಜಿಲ್‌ ಸೇರಿದಂತೆ ಇತರೆ ದೇಶಗಳಲ್ಲಿ ಬೇಡಿಕೆ
Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಫ್ಯಾಶನ್ ಫ್ರೂಟ್ ಎಂದು ಕರೆಯಲ್ಪಡುವ ವಿಲಕ್ಷಣವಾದ ಹಣ್ಣನ್ನು ನಗರದ ಇದ್ಲೂಡು ರಸ್ತೆಯಲ್ಲಿರುವ ಶೆಟ್ಟಪ್ಪನವರ ಶಂಕರ್ ತಮ್ಮ ಮನೆಯ ಆವರಣದ ಹೂತೋಟದಲ್ಲಿ ಬೆಳೆದಿದ್ದಾರೆ.

ಈ ಗಿಡದ ಬಳ್ಳಿಯು ಹತ್ತಾರು ಮೀಟರ್ ಉದ್ದಕ್ಕೂ ಹಬ್ಬಿ ಸುಮಾರು ಎಂಬತ್ತಕ್ಕೂ ಹೆಚ್ಚು ಹಣ್ಣುಗಳು ಬಿಟ್ಟಿವೆ. ಬೇಸಿಗೆಯ ಹಣ್ಣೆಂದೇ ಹೆಸರಾದ ರಸಭರಿತ ಹಣ್ಣುಗಳು ಆರೋಗ್ಯವರ್ಧಕ ಎಂದೇ ಪ್ರಸಿದ್ಧ.

ಈ ಹಣ್ಣುಗಳ ತಾಯ್ನಾಡು ಬ್ರೆಜಿಲ್ ಆಗಿದ್ದರೂ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಥೈಲ್ಯಾಂಡ್, ದಕ್ಷಿಣ ಅಮೆರಿಕಾ, ಇತರೆ ದ್ವೀಪ ರಾಷ್ಟ್ರಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ಹಣ್ಣುಗಳನ್ನು ಬೆಳೆಯಲಾಗುತ್ತಿದೆ.

ಫ್ಯಾಶನ್ ಹಣ್ಣಿನ ಹೂವುಗಳು ತುಂಬಾ ದೊಡ್ಡದಲ್ಲ, ಆದರೆ ನೋಡಲು ಸುಂದರವಾಗಿವೆ. ಫ್ಯಾಶನ್ ಹಣ್ಣು ಪ್ಯಾಸಿಫ್ಲೋರಾ - ಸಸ್ಯಗಳ ಕುಟುಂಬಕ್ಕೆ ಸೇರಿದೆ, ಇದು ಹಲವಾರು ಶತಮಾನಗಳ ಹಿಂದೆ ‘ಸಂಕಟದ ಹೂವು’ ಎಂಬ ದುಃಖದ ಹೆಸರನ್ನು ಪಡೆಯಿತು. 80 ದಿನಗಳವರೆಗೆ ಪರಾಗಸ್ಪರ್ಶದ ನಂತರ, ಹೂವಿನ ಸ್ಥಳದಲ್ಲಿ ಪರಿಮಳಯುಕ್ತ ಹಣ್ಣು ರೂಪುಗೊಳ್ಳುತ್ತದೆ. ರುಚಿ, ಸುವಾಸನೆ, ಗಮನ ಸೆಳೆಯುವ ಮೈ ಸೌಂದರ್ಯ ಇರುವುದರಿಂದ ಈ ಹಣ್ಣನ್ನು ‘ಉತ್ಸಾಹದ ಹಣ್ಣು’ ಎಂದು ಸಹ ಕರೆಯಲಾಗುತ್ತದೆ.

ಈ ಹಣ್ಣಿನಲ್ಲಿ ಪೋಷಕಾಂಶ ಹೆಚ್ಚು. ಇದರಲ್ಲಿ ಬಿ, ಎ, ಇ ಮತ್ತು ಸಿ ಗುಂಪುಗಳ ಪ್ರಮುಖ ಜೀವಸತ್ವಗಳಿವೆ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಇದರಲ್ಲಿರುವ ಇತರೆ ಅಂಶಗಳು.

ಮಾಗಿದ ಫ್ಯಾಶನ್ ಹಣ್ಣು ಶೇ 50 ರಷ್ಟು ರಸವನ್ನು ಹೊಂದಿರುತ್ತದೆ. ಹಣ್ಣಿನ ತಿರುಳು ಹಳದಿ-ಕಿತ್ತಳೆ ಬಣ್ಣವಿದ್ದು, ಒಳಗೆ ರಸಭರಿತ, ಸಿಹಿ ಮತ್ತು ಹುಳಿ, ಹೆಚ್ಚಿನ ಸಂಖ್ಯೆಯ ಬೀಜಗಳನ್ನು ಹೊಂದಿದೆ. ಸಿಹಿ ಮತ್ತು ಹುಳಿ ಮಿಶ್ರಿತ ರುಚಿ ಹೊಂದಿದೆ.

ನಮ್ಮ ಭಾಗದಲ್ಲಿ ಈ ಹಣ್ಣನ್ನು ಯಾರೂ ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಡೆಂಗಿ ಜ್ವರ ವ್ಯಾಪಕವಾಗಿ ಬಂದಾಗ, ಜ್ವರ ಬಾಧಿತರಿಗೆ ಫ್ಯಾಶನ್ ಫ್ರೂಟ್ ಅತಿ ಒಳ್ಳೆ ಆಹಾರ ಎಂದು ನೀಡಲಾಯಿತು. ಈ ಹಣ್ಣು ಸೇವಿಸಿದ ನಂತರ ಬಿಳಿ ರಕ್ತದ ಕಣಗಳು ಹೆಚ್ಚಿದ ಬಗ್ಗೆ ವ್ಯಾಪಕವಾಗಿ ಸುದ್ದಿ ಹರಡಿತು. ನಂತರ ಜನ ಈ ಹಣ್ಣನ್ನು ಸ್ವಲ್ಪಮಟ್ಟಿಗೆ ಬಳಸುತ್ತಿದ್ದಾರೆ ಎಂದು ಶೆಟ್ಟಪ್ಪನವರ ಶಂಕರ್ ತಿಳಿಸಿದರು.

ಹಣ್ಣಿನಿಂದ ಹಲವು ಪ್ರಯೋಜನ
'ನಾನು ಅದಕ್ಕಾಗಿ ಒಂದಿಷ್ಟೂ ಶ್ರಮಪಡಲಿಲ್ಲ. ಮೊದಲು ಯಾವುದೋ ಬಳ್ಳಿ ಎಂದು ಉದಾಸೀನ ಮಾಡಿದೆ. ನಮ್ಮ ಸಂಬಂಧಿಕರೊಬ್ಬರು ಬಂದಾಗ ನೋಡಿ ಈ ಹಣ್ಣಿನ ಬಗ್ಗೆ ವಿವರಿಸಿದರು. ಆಗ ಸ್ವಲ್ಪ ಗೊಬ್ಬರ, ನೀರು ಹಾಕಿದೆ. ಬಳ್ಳಿ ಹಬ್ಬಿದಂತೆ ಅದಕ್ಕೆ ಸೂಕ್ತ ಆಶ್ರಯವನ್ನು ಒದಗಿಸಿದೆ. ಈಗ ಪ್ಯಾಶನ್ ಫ್ರೂಟ್ ಬಳ್ಳಿಯಲ್ಲಿ ಬೇಕಾದಷ್ಟು ಹಣ್ಣುಗಳು ಬಿಟ್ಟಿವೆ. ಈ ಹಣ್ಣಿನಿಂದ ತಯಾರಿಸುವ ಶರಬತ್‌ ತುಂಬಾ ರುಚಿಕರ. ಅಲ್ಲದೆ, ಮಂದರಸ (ಸ್ಕ್ವಾಶ್) ಮಾಡಿಟ್ಟು, ಬೇಕಾದಾಗ ಬಳಸಬಹುದು. ಜ್ಯಾಮ್ ಮಾಡಬಹುದು ಎಂದು ಶೆಟ್ಟಪ್ಪನವರ ಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT